Advertisement
ರಾಜ್ಯವು 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹ/ ಭೂಕುಸಿತ ಪರಿಸ್ಥಿತಿ ಹಾಗೂ ಬರ ಪರಿಸ್ಥಿತಿಗಳೆರಡನ್ನೂ ಎದುರಿಸಿದೆ. ಕೊಡಗು ಮತ್ತು ಸಮೀಪದ ಮಲೆನಾಡು ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಭೂ ಕುಸಿತದಿಂದ ತೀವ್ರ ಹಾನಿ ಸಂಭವಿಸಿದರೆ, ಇತರ ಭಾಗಗಳಲ್ಲಿ ಅಂದರೆ ರಾಜ್ಯದ 100 ತಾಲ್ಲೂಕುಗಳಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತಲೆದೋರಿತ್ತು. ಇದಕ್ಕೆ ಎಸ್‍ಡಿಆರ್‍ಎಫ್/ ಎನ್‍ಡಿಆರ್‍ಎಫ್ ಮಾರ್ಗಸೂಚಿಗಳ ಪ್ರಕಾರ 2434 ಕೋಟಿ ರೂ. ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಈ ಮೊತ್ತದ ಕೇವಲ ಶೇ. 50 ಕ್ಕೂ ಕಡಿಮೆ ಅಂದರೆ 949.49 ಕೋಟಿ ರೂ. ಪರಿಹಾರ ಮಂಜೂರು ಮಾಡಿದೆ.
ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡರಲ್ಲಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಭವಿಸಿದ ನಷ್ಟು 32,335 ಕೋಟಿ ರೂ. ಗಳಷ್ಟಾಗಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮಗಳನ್ನು ತೆಗೆದುಕೊಂಡಿದ್ದು, ಎಸ್‍ಡಿಆರ್‍ಎಫ್ ನಿಧಿಯಲ್ಲದೆ ರಾಜ್ಯ ಸರ್ಕಾರದಿಂದ 386 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು, ಮೇವು ಒದಗಿಸುವ ಜೊತೆಗೆ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 8.18 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದಕ್ಕಾಗಿ ಬಾಕಿ ಉಳಿದಿರುವ 1351 ಕೋಟಿ ರೂ. ಗಳಷ್ಟು ವೇತನ ಹಾಗೂ ಸಾಮಗ್ರಿ ವೆಚ್ಚದ ಕೇಂದ್ರದ ಪಾಲನ್ನೂ, ಕೇಂದ್ರದಿಂದ ಅನುದಾನ ಬಿಡುಗಡೆಯನ್ನು ನಿರೀಕ್ಷಿಸಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ. ಆದ್ದರಿಂದ ಈ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದರು. ಇದಲ್ಲದೆ ಈಗಾಗಲೇ ಭಾರತ ಸರ್ಕಾರಕ್ಕೆ ರಾಜ್ಯವು ಪ್ರಸ್ತಾವನೆ ಸಲ್ಲಿಸಿರುವಂತೆ ಬರ ಪರಿಹಾರ ಹಾಗೂ ನಿರ್ವಹಣೆಗೆ ಎಸ್‍ಡಿಆರ್‍ಎಫ್/ ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಅಗತ್ಯವಿರುವ 2064.30 ಕೋಟಿ ರೂ. ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಅವರು ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
Related Articles
Advertisement