Advertisement

ಸಿಎಂ ಭೇಟಿ: ಗರಿಗೆದರಿದ ಕರಾವಳಿ ನಿರೀಕ್ಷೆಗಳು

09:29 AM Sep 07, 2018 | Team Udayavani |

ಮಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೆ. 7ರಂದು ಕರಾವಳಿಗೆ ಆಗಮಿಸುತ್ತಿದ್ದು, ಜಿ.ಪಂ. ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.

Advertisement

ಮುಖ್ಯಮಂತ್ರಿಯಾದ ಬಳಿಕ ಕರಾವಳಿಯಲ್ಲಿ ಇದು ಅವರ‌ ಪ್ರಥಮ ಸರಕಾರಿ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ಮುಖ್ಯಮಂತ್ರಿಯಾದ ಬಳಿಕ ಖಾಸಗಿಯಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

ಮೇ 23ರಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವೀಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲೆಯ ಅಧಿಕಾರಿಗಳ ಜತೆ ಸಂವಾದ ನಡೆಸಿದ್ದರು. ಕೇವಲ ಮೂರೂವರೆ ತಿಂಗಳಲ್ಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಆಗಮಿಸಿ ಪ್ರಗತಿ ಪರಿಶೀಲನೆ ಸಭೆ ಆಯೋಜಿಸಿದ್ದಾರೆ. ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಟೀಕೆಗೊಳಗಾದ ಹಿನ್ನೆಲೆಯಲ್ಲಿ ಈ ಕ್ರಮ ಗಮನಾರ್ಹವಾಗಿದೆ.

ವಿವಿಧ ಬೇಡಿಕೆ ಸಲ್ಲಿಕೆ ಸಾಧ್ಯತೆ
ಮಳೆ ಹಾನಿ ಪರಿಹಾರಕ್ಕೆ ವಿಶೇಷ ನೆರವು, ರಬ್ಬರ್‌ ಬೆಳೆಗಾರರಿಗೆ ಹಾಗೂ ಅಡಿಕೆ ಬೆಳೆಗಾರರಿಗೆ ಬೆಂಬಲ ಬೆಲೆ, ಕರಾವಳಿಗೆ ವಿಶೇಷ ಮರಳು ನೀತಿ, ಕೋಮು ಸಂಘರ್ಷ, ಹತ್ಯೆಗಳನ್ನು ತಡೆಗಟ್ಟಲು ವಿಶೇಷ ಕಾರ್ಯಪಡೆ ರಚನೆ ಹಾಗೂ ವಿಶೇಷ ದಳಗಳ ನಿಯೋಜನೆ, ಪ್ರವಾಸೋದ್ಯಮ ಅವಕಾಶಗಳನ್ನು ಬಳಸಿಕೊಳ್ಳಲು ಕಾರ್ಯಯೋಜನೆ, ಉದ್ಯೋಗ ಸೃಷ್ಟಿಗೆ ಯೋಜನೆಗಳು, ಮಂಗಳೂರು ನಗರದಲ್ಲಿ ಸಂಚಾರ ದಟ್ಟನೆ ನಿವಾರಣೆಗೆ ಬೆಂಗಳೂರು ಮಾದರಿಯ ಯೋಜನೆಗಳ ಅನುಷ್ಠಾನ ಮುಂತಾದ ಬೇಡಿಕೆ ಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಜಿಲ್ಲಾ ಉಸ್ತು ವಾರಿ ಸಚಿವ ಯು.ಟಿ. ಖಾದರ್‌ ಅವರು ಕಾಲು ನೋವಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಖ್ಯಮಂತ್ರಿಗಳು ನಡೆಸುವ ಸಭೆಗೆ ಗೈರುಹಾಜರಾಗುವ ಸಾಧ್ಯತೆಯಿದೆ.

ಪಕ್ಷದ ನಾಯಕರ ಜತೆ ಮಾತುಕತೆ 
ಸಭೆಯ ಬಳಿಕ ಸಿಎಂ ಜಿಲ್ಲೆಯ ಜೆಡಿಎಸ್‌ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ  ಮಹಮ್ಮದ್‌ ಕುಂಞಿ ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್‌ ಉತ್ಸಾಹ ಗಳಿಸಿದೆ. ಹಲವು ವರ್ಷಗಳಿಂದ ಬಿಜೆಪಿ ವಶದಲ್ಲಿದ್ದ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಉಳ್ಳಾಲ ನಗರಸಭೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ 4 ಸ್ಥಾನಗಳನ್ನು ಪಡೆದುಕೊಂಡಿದೆ. ಜಿಲ್ಲೆಯವರೇ ಆದ ಬಿ.ಎಂ. ಫಾರೂಕ್‌ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು  ಶಕ್ತಿ ತುಂಬಲಾಗಿದೆ.

Advertisement

ಮುಖ್ಯಮಂತ್ರಿ ಇಂದು ಕರಾವಳಿಗೆ 
ಮಂಗಳೂರು/ಉಡುಪಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸೆ. 7ರಂದು ಕರಾವಳಿಗೆ ಆಗಮಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನ ಸಭೆ ನಡೆಸಲಿದ್ದಾರೆ. ಬೆಳಗ್ಗೆ 8.50ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿ ಮೊದಲು ಉಡುಪಿಗೆ ತೆರಳಲಿದ್ದಾರೆ. ಬೆಳಗ್ಗೆ 10ಕ್ಕೆ ಉಡುಪಿ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಮರಳಿ, ಮಂಗಳೂರು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನ ಸಭೆ ನಡೆಸಲಿದ್ದಾರೆ. ರಾತ್ರಿ 9.55ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next