Advertisement
ಕುಮಾರಸ್ವಾಮಿ ಅವರು ಬ್ರಾಹ್ಮಣ ಸಮುದಾಯ ಬಗ್ಗೆ ಮಾಡಿರುವ ಆರೋಪಗಳನ್ನು ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಿರುವ ಅಶೋಕ್ ಹಾರನಹಳ್ಳಿ, ಮುಂದಿನ ದಿನಗಳಲ್ಲಿ ಮತ್ತೂಮ್ಮೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಆಕಾಂಕ್ಷೆ ಹೊಂದಿರುವ ಕುಮಾರಸ್ವಾಮಿ ಅವರ ಮೇಲೆ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿಯಿದೆ ಎಂಬುದನ್ನು ಮರೆಯಬಾರದು ಎಂದಿದ್ದಾರೆ.
Related Articles
ಪ್ರಲ್ಹಾದ ಪ್ರಹ್ಲಾದ ಜೋಶಿ ಅವರನ್ನು ಟೀಕೆ ಮಾಡುವ ಸಂಧರ್ಭದಲ್ಲಿ ಅವರು ಗಾಂಧೀಜಿ ಅವರನ್ನು ಕೊಂದ ಸಮುದಾಯದವರೆಂದು ಹಾಗು ಮಹಾರಾಷ್ಟ್ರ ಮೂಲದ ಪೇಶ್ವೆಗಳಾಗಿ ಸೇವೆ ಸಲ್ಲಿಸಿದ ದೇಶಸ್ಥ ಬ್ರಾಹ್ಮಣರೆಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ. ಆದರೆ ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದ ಉತ್ತರಾಧಿಮಠದ ಅನುಯಾಯಯಿಗಳು. ಇವರು ಉತ್ತರ ಕರ್ನಾಟಕದ ಮೂಲದವರೇ ಆಗಿದ್ದು ಮಹಾರಾಷ್ಟ್ರಕ್ಕೆ ಸೇರಿದವರಲ್ಲ. ಅರ್ಹತೆಯೇ ಮಾನದಂಡವಾದಲ್ಲಿ ಜೋಶಿ ಅವರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ, ಕೇವಲ ಜಾತಿಯ ಆಧಾರದ ಮೇಲೆ ವೈಯಕ್ತಿಕ ಟೀಕೆ ಸೂಕ್ತವಲ್ಲ ಅವರ ಹಾಗು ಅವರ ಪಕ್ಷದ ರಾಜಕೀಯ ನಿಲುವುಗಳನ್ನು ಪ್ರಶ್ನಿಸಬಹುದು ಆದರ ಜಾತಿ ಆಧಾರದ ಮೇಲೆ ವ್ಯಯಕ್ತಿಕ ಟೀಕೆ ಸರಿಯಲ್ಲ ಎಂದು ಹೇಳಿದ್ದಾರೆ.
Advertisement
ಹಿಂದೆ ನಡೆದು ಹೋದ ಗಾಂಧಿ ಹತ್ಯೆಯನ್ನೇ ಗುರಿಯಾಗಿಟ್ಟುಕೊಂಡು ಇಂದಿಗೂ ಚಿತ್ಪಾವನ ಬ್ರಾಹ್ಮಣ ಸಮುದಾಯವನ್ನು ದೂಷಿಸುವುದು ಎಷ್ಟು ಸರಿ? ನೂರಾರು ವರುಷಗಳ ಹಿಂದೆಯೇ ಕರ್ನಾಟಕದ ನಾನಾ ಭಾಗಗಳಲ್ಲಿ ಬಂದು ನೆಲೆಸಿರುವ ಚಿತ್ಪಾವನ ಹಾಗು ದೇಶಸ್ಥ ಬ್ರಾಹ್ಮಣರು ನಮ್ಮ ನಾಡು ನುಡಿಯೊಂದಿಗೆ ಬೆರೆತು ಕನ್ನಡಿಗರೇ ಆಗಿ ಹೋಗಿದ್ದಾರೆ. ಚಿತ್ಪಾವನರಾದ ವರ ಕವಿ ಬೇಂದ್ರೆ ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾರೆವು. ಕರ್ನಾಟಕದ ಏಕೀಕರಣಕ್ಕೆ ಆಲೂರ ವೆಂಕಟರಾಯರ ಸಂಕಲ್ಪಕ್ಕೆ ಅಂದು ಸಂಸತ್ತಿನಲ್ಲೇ ಸಂಪೂರ್ಣ ಬೆಂಬಲ ಘೋಷಿಸಿದವರು ಚಿತ್ಪಾವನ ಮುಖಂಡರು. ಭೂದಾನದಂತ ಮಹಾ ಯಜ್ಞವನ್ನು ಕೈಗೊಂಡ ವಿನೋಬಾ ಭಾವೆ ಚಿತ್ಪಾವನರು ಎಂದು ತಿಳಿಸಿದ್ದಾರೆ.
ನಾಥುರಾಂ ಗೋಡ್ಸೆ ಎಂಬ ದಾರಿ ತಪ್ಪಿದ ದೇಶ ಭಕ್ತನೊಬ್ಬ ಗಾಂಧಿಯನ್ನು ಕೊಂದನೆಂದು ಆ ಸಮುದಾಯಕ್ಕೆ ಸೇರಿದ ಎಲ್ಲರನ್ನು ದೋಷಿಗಳಂತೆ ನೋಡುವುದು ಸಮಂಜಸವಲ್ಲ. ಹಾಗೆ ಮಾಡಿದರ ಚಿತ್ಪಾವನ ಬ್ರಾಹ್ಮಣ ಸಮಾಜದ ಸ್ವತಂತ್ರ ಹೋರಾಟಗಾರರಾದ ಚಾಪೇಕರ ಸಹೋದರರು, ಬಲವಂತ ಪಡ್ಕೆ , ಸಾವರ್ಕರ್, ಜಸ್ಟಿಸ್ ರಾನಡೆ, ಅಚ್ಚುತ ಪಟವರ್ಧನ್, ಕಾಕಾಸಾಹೇಬ್ ಗಾಡ್ಗೀಳ್, ರಾವ್ ಸಾಹೇಬ್ ಪಟವರ್ಧನ್, ಲಿಮಯೆ, ಸೇನಾಪತಿ ಬಾಪಟ್, ಅನಂತ್ ಕಾನಕರೆ, ತಾತ್ಯಾ ಟೋಪೆ, ಮಹದೇವ್ ರಾನಡೆ ಹಾಗು ಗಾಂಧೀಜಿಯವರ ಗುರುಗಳಾದ ಗೋಖಲೆ, ಸ್ವರಾಜ್ಯದ ಕಲ್ಪನೆಯನ್ನು ಬಿತ್ತಿದ ತಿಲಕರು ಇವರೆಲ್ಲರ ರಾಷ್ಟ್ರ ಭಕ್ತಿಯನ್ನೇ ಈ ಹೇಳಿಕೆ ಪ್ರಶ್ನಿಸದಂತಾಗುತ್ತದೆ ಎಂದು ಟೀಕಿಸಿದರು.
ಪ್ರಸ್ಥಾನತ್ರಯವನ್ನು ಅರ್ಥೈಸಿಕೊಳ್ಳುವ ಮಾರ್ಗದಲ್ಲಿ ಸ್ಮಾರ್ತರು, ವೈಷ್ಣವರು, ಶ್ರೀ ವೈಷ್ಣವರಲ್ಲಿ ಕೆಲವು ಭಿನ್ನ ಭಿನ್ನ ಅಭಿಪ್ರಾಯಗಳಿರಬಹುದು. ಆದರೂ ಎಲ್ಲಾ ತ್ರಿಮತಸ್ಥ ಆಚಾರ್ಯರು ಸನಾತನ ಧರ್ಮದ ರಕ್ಷಣೆ ಹಾಗು ಪೋಷಣೆಗೆ ಕಾರಣೀಭೂತರಾಗಿದ್ದಾರೆ. ಎಲ್ಲಾ ಆಚಾರ್ಯರು ಸಹ ಸಮಸ್ತ ಮನುಕುಲದ ಶ್ರೇಯಸ್ಸನ್ನೇ ಆಶಿಸಿದ್ದಾರೆ ಎಂದು ಹೇಳಿದರು.