Advertisement

“ಕಾಂಗ್ರೆಸ್‌ನಿಂದ ಜೆಡಿಎಸ್‌ ದೂರವಾಗಿರುವುದಕ್ಕೆ ಕುಮಾರಸ್ವಾಮಿಯೇ ಉತ್ತರಿಸಲಿ’

01:53 AM Jan 05, 2021 | Team Udayavani |

ಮಂಗಳೂರು: ಪಕ್ಷ ಸಂಘಟನೆ ಉದ್ದೇಶದಿಂದ ಬಿಜೆಪಿಯು ಮೊದಲ ಬಾರಿಗೆ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಕೇಂದ್ರ ಸ್ಥಾನ ಬಿಟ್ಟು ಮಂಗಳೂರಿನಲ್ಲಿ ಆಯೋಜಿಸಿದ ಬಳಿಕ ಇದೀಗ ಕಾಂಗ್ರೆಸ್‌ ಕೂಡ ಬೂತ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆಗಾಗಿ ವಿಭಾಗವಾರು “ಸಂಕಲ್ಪ ಸಮಾವೇಶ’ಕ್ಕೆ ದಕ್ಷಿಣ ಕನ್ನಡವನ್ನು ಆಯ್ದುಕೊಂಡಿದೆ. ಮೈಸೂರು ವಿಭಾಗದ ಸಂಕಲ್ಪ ಸಮಾವೇಶ ಬಂಟ್ವಾಳದಿಂದ ಜ. 6ರಂದು ಚಾಲನೆಗೊಳ್ಳುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಇತ್ತೀಚಿನ ರಾಜಕೀಯ ಬೆಳವಣಿಗೆ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಅವರನ್ನು ಉದಯವಾಣಿ ಮಾತನಾಡಿಸಿದೆ.

 ಗ್ರಾ.ಪಂ. ಚುನಾವಣೆ ಫಲಿತಾಂಶ ತೃಪ್ತಿ ತಂದಿದೆಯೇ?
ಈ ಚುನಾವಣೆ ಪಕ್ಷಾತೀತವಾಗಿದ್ದರೂ ರಾಜ್ಯದಲ್ಲಿ ನಾವು ಉತ್ತಮ ಫ‌ಲಿತಾಂಶ ದಾಖಲಿಸಿದ್ದೇವೆ. ಬೇರೆಯವರು ಹೇಗೆ ವಿಶ್ಲೇಷಿಸಿದರೂ ನಮಗೆ ತೃಪ್ತಿ ತಂದಿದೆ. ಮುಂಬರುವ ಚುನಾವಣೆಗಳತ್ತ ನಮ್ಮ ವಿಶ್ವಾಸವನ್ನು ಹೆಚ್ಚಿಸಿದೆ.

 ಬಿಜೆಪಿ ಜತೆಗೆ ಜೆಡಿಎಸ್‌ ವಿಲೀನ ಎಂಬ ಮಾತಿನ ಬಗ್ಗೆ ಅಭಿಪ್ರಾಯ?
ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಎಚ್‌. ಡಿ. ದೇವೇಗೌಡರು ಈಗ ಮೌನಕ್ಕೆ ಏಕೆ ಶರಣಾಗಿದ್ದಾರೆ? ಇತ್ತೀಚೆಗೆ ನಡೆದ ಕೆಲವು ಘಟನೆಗಳಿಗೆ ಹಾಗೂ ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗಳಿಗೆ ತಮ್ಮ ಸಹಮತವಿದೆಯೇ? ವಿಧಾನ ಪರಿಷತ್‌ ಸಭಾಪತಿ ಪದಚ್ಯುತಿಗೊಳಿಸುವ ಹುನ್ನಾರಕ್ಕೂ ದೇವೇಗೌಡರ ಒಪ್ಪಿಗೆ ಇತ್ತೇ ಎಂಬುದನ್ನೂ ಹೇಳಬೇಕು. ಜಾತ್ಯತೀತ ಎಂದು ಹೇಳಿಕೊಂಡು ಬಂದವರಿಗೆ ಬಿಜೆಪಿಗೆ ಬೆಂಬಲ ನೀಡುವ ಅನಿವಾರ್ಯತೆ ಈಗ ಏಕೆ ?

ಯಡಿಯೂರಪ್ಪ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಯಾವ ನೆಲೆಯಲ್ಲಿ ನಿಮ್ಮ ಪಕ್ಷ ಆರೋಪಿಸುತ್ತಿದೆ?
ನಮ್ಮ ಪಕ್ಷದ ಶಾಸಕರನ್ನು ಖರೀದಿ ಮಾಡಿ ವಾಮಮಾರ್ಗದ ಮೂಲಕ ಅಧಿಕಾರ ಪಡೆದ ಸರಕಾರವಿದು. ಒಂದೂವರೆ ವರ್ಷದಲ್ಲಿ ಇದರ ಸಾಧನೆ ಏನೆಂಬುದು ಜನತೆಗೆ ಗೊತ್ತಿದೆ. ಕೊರೊನಾ ನಿಯಂತ್ರಣ ವಿಚಾರದಲ್ಲೇ ಸಚಿವರು-ಅಧಿಕಾರಿಗಳ ನಡುವೆ ಯಾವುದೇ ಸಮನ್ವಯತೆ ಇಲ್ಲದೆ ಗಂಟೆಗೊಂದು ಹೇಳಿಕೆ-ಆದೇಶ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರದ ಆರೋಪ ಮಾಡಿದ್ದರೂ ಇಲ್ಲಿವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಕಾನೂನು-ಸುವ್ಯವಸ್ಥೆ ಸೇರಿದಂತೆ ನಾನಾ ವಿಚಾರಗಳಿಗೆ ಸಂಬಂಧಿಸಿದಂತೆ ಸರಕಾರದ ವೈಫಲ್ಯಕ್ಕೆ ಹಲವು ನಿದರ್ಶನಗಳಿವೆ.

Advertisement

 ಪಕ್ಷದೊಳಗೇ ಬಣ ರಾಜಕೀಯ ಇದೆಯಲ್ಲಾ?
ನಮ್ಮದು ಒಂದೇ ಬಣ; ಅದು ಸೋನಿಯಾ ಗಾಂಧಿ ಬಣ. ಕೆಲವರು ಭಾವನಾತ್ಮಕವಾಗಿ ಕೆಲವೊಮ್ಮೆ ಮಾತನಾಡುತ್ತಾರೆ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಸೇರಿದಂತೆ ನಾವೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಕಟ್ಟುತ್ತಿದ್ದೇವೆ. ಪಕ್ಷದ ನೆಲೆಯಲ್ಲಿ ಯಾವುದೇ ಗುಂಪುಗಾರಿಕೆ ನಮ್ಮಲ್ಲಿಲ್ಲ.

 ಅಲ್ಪಸಂಖ್ಯಾಕರ ಮತ ವಿಭಜನೆ ಪಕ್ಷದ ಹಿನ್ನಡೆಗೆ ಕಾರಣವೇ?
ಜಾತ್ಯತೀತ ಸಿದ್ಧಾಂತದ ಮೇಲೆ ಬೆಳೆದು ಬಂದ ಕಾಂಗ್ರೆಸ್‌ನಿಂದ ಮಾತ್ರ ಅಲ್ಪಸಂಖ್ಯಾಕ ಸಮುದಾಯದ ಹಿತ ಕಾಪಾಡಲು ಸಾಧ್ಯ. ಅದೇರೀತಿ ಅಲ್ಪಸಂಖ್ಯಾಕ ಸಮುದಾಯದ ಕೂಡ ಕಾಂಗ್ರೆಸ್‌ ಪರವಾಗಿದೆ. ಮುಂದಿನ ದಿನಗಳಲ್ಲಿಯೂ ಅವರೆಲ್ಲರೂ ನಮ್ಮ ಪಕ್ಷ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ.

 ದ.ಕ. ಜಿಲ್ಲೆಯ ಆಯ್ಕೆ ಬಿಜೆಪಿಯ ಸಮಾವೇಶಕ್ಕೆ ಪ್ರತಿತಂತ್ರವೇ?
ವಿಭಾಗವಾರು “ಸಂಕಲ್ಪ ಸಮಾವೇಶ’ ಮಾಡಲು ತೀರ್ಮಾನಿ ಸಲಾಯಿತು. ಬಂಟ್ವಾಳದಿಂದ ಆರಂಭಿಸುವಂತೆೆ ಇಲ್ಲಿನ ಹಿರಿಯ ನಾಯಕರು ಸಲಹೆ ಕೊಟ್ಟರು. ಹಾಗಾಗಿ ಈ ಇಲ್ಲಿಂದ ಆರಂಭಿಸುತ್ತಿದ್ದೇವೆಯೇ ಹೊರತು ಬಿಜೆಪಿಯವರು ಇಲ್ಲಿ ಕಾರ್ಯಕಾರಿಣಿ ಮಾಡಿದ್ದಾರೆಂಬ ಕಾರಣಕ್ಕಲ್ಲ. ಪಕ್ಷ ಸಂಘಟನೆ ಹಾಗೂ ಮುಂದಿನ ತಾ.ಪಂ., ಜಿ.ಪಂ. ಚುನಾವಣೆಯ ದೃಷ್ಟಿಯಿಂದ ಸಮಾವೇಶ ಸಂಘಟಿಸಲಾಗುತ್ತಿದೆ.

ದ.ಕ.ವನ್ನು ಮತ್ತೆ ಪಕ್ಷದ ಭದ್ರಕೋಟೆ ಯಾಗಿಸುತ್ತೀರಾ?
ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆ ಯಾಗಿದ್ದ ಜಿಲ್ಲೆಯಲ್ಲಿ ಸದ್ಯ ಸ್ವಲ್ಪ ಹಿನ್ನಡೆ ಯಾಗಿರಬಹುದು. ಹಂತ-ಹಂತವಾಗಿ ಕರಾವಳಿಯಲ್ಲಿ ಪಕ್ಷ ಬಲವರ್ಧನೆಗೊಳ್ಳಲಿದೆ. ಇಲ್ಲಿನ ಎಲ್ಲ ನಾಯಕರ ಸಲಹೆ ಪಡೆದು ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ.

ವಿಪಕ್ಷವಾಗಿ ಕಾಂಗ್ರೆಸ್‌ ಸಮರ್ಥವಾಗಿ ಧ್ವನಿಯೆತ್ತುತ್ತಿಲ್ಲ ಎಂಬ ಆರೋಪ ಇದೆಯಲ್ಲ?
ಹಲವು ವಿಷಯಗಳಲ್ಲಿ ಹೋರಾಟ ನಡೆಸಿದ್ದೇವೆ. ನಿಜ; ಕೆಲವೆಡೆೆ ಅಥವಾ ವಿಚಾರದಲ್ಲಿ ಸರಕಾರದ ವೈಫಲ್ಯವನ್ನು ಸಮರ್ಥವಾಗಿ ಬಿಂಬಿಸುವಲ್ಲಿ ದೋಷಗಳಾಗಿರಬಹುದು. ಆದರೆ ನಾವು ಎಷ್ಟೇ ಹೋರಾಡಿದರೂ ಇದು ದಪ್ಪ ಚರ್ಮದ ಸರಕಾರ. ಯುಪಿಎ ಸರಕಾರದ ಕಾರ್ಯಕ್ರಮಗಳನ್ನು ಮುಂದುವರಿಸುತ್ತಿದೆ ಅಷ್ಟೇ.

 ಜೆಡಿಎಸ್‌ನ ಜತೆ ಈಗ ಮುನಿಸು ಯಾಕೆ?
ನಮ್ಮ ಹೋರಾಟದ ಮೊದಲ ಹಂತವೇ ಪಕ್ಷ ಸಂಘಟನೆ. ಹೀಗಿರುವಾಗ ಮುಂದೆ ಸಂದರ್ಭ ಬಂದಾಗ ನೋಡೋಣ. ನಾವು ಯಾವತ್ತೂ ಜೆಡಿಎಸ್‌ನವರಿಗೆ ತೊಂದರೆ ಕೊಟ್ಟಿಲ್ಲ. ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಉನ್ನತ ಪದವಿಗೆ ಏರಿಸಲು ಕಾಂಗ್ರೆಸ್‌ ಎಲ್ಲ ರೀತಿ ಸಹಕರಿಸಿದೆ. ನಮ್ಮಿಂದ ಯಾವುದೇ ತಪ್ಪು ಆಗಿಲ್ಲ. ಒಂದುವೇಳೆ, ಅವರು ನಮ್ಮನ್ನು ದೂರ ಮಾಡುತ್ತಿದ್ದರೆ ಅದಕ್ಕೆ ಕಾರಣವನ್ನು ಅವರೇ ಹೇಳಲಿ.

Advertisement

Udayavani is now on Telegram. Click here to join our channel and stay updated with the latest news.

Next