Advertisement

ರೈತರ ದುಡ್ಡಲ್ಲಿ ರಮೇಶ ಜಾರಕಿಹೊಳಿ ಸಾಹುಕಾರಕಿ: ಎಚ್ಡಿಕೆ ವಾಗ್ದಾಳಿ

09:35 AM Nov 19, 2019 | Sriram |

ಬೆಳಗಾವಿ: ಗೋಕಾಕ್‌ನ ಬಿಜೆಪಿ ರಮೇಶ ಜಾರಕಿಹೊಳಿ ರೈತರ ದುಡ್ಡಲ್ಲಿ ಸಾಹುಕಾರಕಿ ಮಾಡಿಕೊಂಡು ಬಂದಿದ್ದಾರೆ. ರೈತರಿಗೆ ಬಾಕಿ ಹಣ ನೀಡದೇ ಕದ್ದು ತಿರುಗುವ ಸಾಹುಕಾರ್ ಇವರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

Advertisement

ಇಲ್ಲಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಅವರನ್ನು ಸೋಲಿಸುವುದಕ್ಕಿಂತ ಅಶೋಕ ಪೂಜಾರಿಯನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ರಮೇಶ ಕರ್ಮಕಾಂಡವನ್ನು ಸಹೋದರರೇ ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ರಮೇಶ ಬಹಳ ದುರಹಂಕಾರವಿದೆ. ಜನರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ರಮೇಶ ಅವರ ಸಾಹುಕಾರಿಕೆ ಏನು ಎಂಬುದನ್ನು ಚುನಾವಣಾ ಪ್ರಚಾರಕ್ಕೆ ಬಂದಾಗ ಹೇಳುತ್ತೇನೆ. ಮೈತ್ರಿ ಸರ್ಕಾರ ಪತನಕ್ಕೆ ಗೋಕಾಕನ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಲೀಡರ್ ಎಂದು ವಾಗ್ದಾಳಿ ನಡೆಸಿದರು.

ನಾನು ಆತುರ ಪಡದೇ ಜಿಲ್ಲೆಯ ಮೂರೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇನೆ. ಈ ಉಪಚುನಾವಣೆ ನನಗೆ ಸವಾಲ್ ಆಗಿದೆ. ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಲ ಮನ್ನಾ ಆಗಿದೆ. ಬೆಳಗಾವಿ ಜೆಡಿಎಸ್ ಅಭ್ಯರ್ಥಿಗಳನ್ನು ಕಾಂಗ್ರೆಸ್ ನಾಯಕರ ಮಾತು ಕೇಳಿ ಆಯ್ಕೆ ಮಾಡಿಲ್ಲ. ಗೋಕಾಕನ ನಾಮಪತ್ರ ಸಲ್ಲಿಸಲು ನಾನು ಬರಬೇಕಿತ್ತು. ತಡವಾಗಿದ್ದರಿಂದ ಬರಲು ಆಗಲಿಲ್ಲ. ಗೋಕಾಕ ಅಥಣಿ, ಕಾಗವಾಡ ಅಭ್ಯರ್ಥಿಗಳ ಸಭೆ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಲಾಗುವುದು ಎಂದರು.

ನೆರೆ ಸಂತ್ರಸ್ತರಿಗೆ ಈ ಸರ್ಕಾರ ಅನ್ಯಾಯ ಮಾಡಿದೆ. ನಿರಾಶ್ರಿತರ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟಿದ್ದಾರೆ. ಈ ಸಕಾರದ ಗಮನ ಕೇವಲ ಚುನಾವಣೆ ಮೆಲೆಯೇ ಇದೆ. ನಾನು ಸಿಎಂ ಇದ್ದಾಗ ಬೆಳಗಾವಿ ಜಿಲ್ಲೆಗೆ ಹೆಚ್ಚಿಗೆ ಅನುದಾನ ಕೊಟ್ಟಿದ್ದೇನೆ ಎಂದ ಕುಮಾರಸ್ವಾಮಿ, ಅಶೋಕ ಪೂಜಾರಿ ಸ್ವಂತ ಮನೆಗೆ ಬಂದಿದ್ದು, ಪಕ್ಷಾಂತರ ಮಾಡಿಲ್ಲ, ಇವತ್ತು ಜೆಡಿಎಸ್ ಅಭ್ಯರ್ಥಿ ಆಗಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ನಾನು ಒಂದು ವಾರ ಬೆಳಗಾವಿಯಲ್ಲಿಯೇ ಇದ್ದು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next