ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ಕನಕಪುರ ತಾಲೂಕು ಸಾತನೂರು ಹೋಬಳಿ ಕೋಡಿಹಳ್ಳಿ ಗ್ರಾಮಕ್ಕೆ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ಧೈರ್ಯ ತುಂಬಿದರು.
ಮಗನ ಬಂಧನ ಸುದ್ದಿ ಕೇಳಿ ಕುಗ್ಗಿ ಹೋಗಿದ್ದ ಗೌರಮ್ಮ, ಕುಮಾರಸ್ವಾಮಿ ಅವರನ್ನು ಕಂಡಾಕ್ಷಣ ಬಿಕ್ಕಿ, ಬಿಕ್ಕಿ ಅತ್ತು ತಮ್ಮ ನೋವು ತೋಡಿಕೊಂಡರು. ಹಿರಿ ಜೀವದ ಕಾಲಿಗೆ ನಮಸ್ಕಾರ ಮಾಡಿದ ಮಾಜಿ ಸಿಎಂ, ಗೌರಮ್ಮ ಅವರನ್ನು ಸಮಾಧಾನಪಡಿಸಿದರು. ನಂತರ ಕುಮಾರಸ್ವಾಮಿಯವರೇ ಗೌರಮ್ಮ ಅವರನ್ನು ಸೋಫಾದಲ್ಲಿ ಕೂರಿಸಿ, ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಶಿವಕುಮಾರ್ ಹೊರ ಬರುತ್ತಾರೆ. ನಿಮ್ಮ ಜೊತೆಗೆ ನಾವಿದ್ದೇವೆ. ಆರೋಗ್ಯದ ಕಡೆ ಗಮನ ಕೊಡಿ ಎಂದು ಧೈರ್ಯ ತುಂಬಿದರು.
ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುವ ಅಗತ್ಯವಿರಲಿಲ್ಲ. ಶಿವಕುಮಾರ್ ಅವರ ತಾಯಿಯವರ ನೋವು, ಕಣ್ಣೀರಿನ ಕಿಚ್ಚು ಆ ಪಕ್ಷವನ್ನು (ಬಿಜೆಪಿ) ನಾಶ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪ್ರಕರಣ ರಾಜ್ಯದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿ, ಸಿದ್ದಾರ್ಥ ಅವರು ಇಟಿ ಅಧಿಕಾರಿಗಳಿಂದ ಕಿರುಕುಳ ಇದೆ ಎಂದು ಬರೆದ ಪತ್ರವನ್ನೇ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದರು.
ನಂಜಾವಧೂತ ಸ್ವಾಮೀಜಿ ಭೇಟಿ: ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ನಂಜಾವಧೂತ ಸ್ವಾಮೀಜಿ ಅವರು, ಡಿಕೆಶಿ ಪತ್ನಿ ಹಾಗೂ ಮಕ್ಕಳಿಗೆ ಧೈರ್ಯ ತುಂಬಿದರು. ನಂತರ ಮಾತನಾಡಿ, ನೊಂದಿರುವವರನ್ನು ಭೇಟಿ ಮಾಡಿ ಧೈರ್ಯ ತುಂಬುವುದು ನಮ್ಮ ಕರ್ತವ್ಯ. ಶಿವಕುಮಾರ್ ಒಕ್ಕಲಿಗ ಸಮುದಾಯದ ದೊಡ್ಡ ನಾಯಕರು. ಅವರನ್ನು ಬಂಧಿಸಿರುವುದು ಅವರ ಕುಟುಂಬಕ್ಕೆ ಆಘಾತವಾಗಿದೆ. ಅವರ ಪತ್ನಿ ಹಾಗೂ ಮಕ್ಕಳಿಗೆ ಧೈರ್ಯ ಹೇಳಿದ್ದೇನೆ ಎಂದರು.