ಬೆಂಗಳೂರು: ಚುನಾವಣೆ ಹತ್ತಿರವಾಗು ತ್ತಿದ್ದು, ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಹಿರಿಯ ನಾಯಕರ ಮಧ್ಯೆ ಪರಸ್ಪರ ಸಹಕಾರ, ಸಮನ್ವಯದ ಜತೆಗೆ ಹೊಂದಾಣಿಕೆ ಹೆಚ್ಚಿಸಲು ಬಿಜೆಪಿ ವರಿಷ್ಠರು ಮುತುವರ್ಜಿ ವಹಿಸುವ ಸಾಧ್ಯತೆ ಇದೆ. ಬಿಜೆಪಿ- ಜೆಡಿಎಸ್ ಮೈತ್ರಿಕೂಟ ರಾಜ್ಯದಲ್ಲಿ “ಗುರಿ-25′ ಹಾಕಿ ಕೊಂಡಿದ್ದು, ಇದನ್ನು ತಲುಪಲು ಪೂರಕವಾಗಿ ಹೆಜ್ಜೆ ಹಾಕುವಂತೆ ರವಿವಾರ ಮೈಸೂರಿನಲ್ಲಿ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಸೂಚಿಸುವ ಸಾಧ್ಯತೆಗಳಿವೆ.
ಹಳೆ ಮೈಸೂರು ಭಾಗದ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕುಮಾರಸ್ವಾಮಿಯವರ ಮಧ್ಯೆ ಭಿನ್ನ ನಿಲುವುಗಳಿವೆ. ಈ ವಿಷಯಗಳನ್ನು ಮುಖಾಮುಖಿ ಕುಳಿತು ಚರ್ಚಿಸಿ ಮೈತ್ರಿಕೂಟ ಬಲವರ್ಧನೆಗೆ ಸಹಕಾರಿ ಯಾಗುವ ನಿಟ್ಟಿನಲ್ಲಿ ಮುನ್ನಡೆಯಬೇ ಕೆಂಬ ಸಂದೇಶವನ್ನು ಅಮಿತ್ ಶಾ
ರವಾನಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೈತ್ರಿಕೂಟ ಘೋಷಣೆಯಾದ ಆರಂಭಿಕ ಹಂತದಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್, ಅಶ್ವತ್ಥನಾರಾಯಣ ಅವರು ಕುಮಾರಸ್ವಾಮಿ ಜತೆಗೆ ಔಪಚಾರಿಕ ಭೇಟಿ ನಡೆಸಿದರೆ, ಕೇಂದ್ರ ಸಚಿವರೂ ಆಗಿರುವ ಇನ್ನೊಬ್ಬ ಹಿರಿಯ ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೆ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಉಭಯ ಪಕ್ಷಗಳ ರಾಜ್ಯ ನಾಯಕರ ನಡುವೆ ಸಮನ್ವಯ ಏರ್ಪಟ್ಟಿಲ್ಲ. ಇದು ಬಿಜೆಪಿ ವರಿಷ್ಠರ ಗಮನಕ್ಕೆ ಬಂದಿದ್ದು, ಮೈಸೂರಿನಲ್ಲಿ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಜಂಟಿ ಸಭೆ ನಡೆಸುವಂತೆ ಅಮಿತ್ ಶಾ ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಭದ್ರಕೋಟೆಯ ಮೇಲೆ ಕಣ್ಣು
ಎಲ್ಲದಕ್ಕಿಂತ ಹೆಚ್ಚಾಗಿ ಬಿಜೆಪಿಯ ಭದ್ರಕೋಟೆಯ ಮೇಲೆ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರೆ. ಮೈಸೂರು ಕ್ಷೇತ್ರದಿಂದ ತಮ್ಮ ಆಪ್ತ ಸಾ.ರಾ. ಮಹೇಶ್ ಅವರನ್ನು ಕಣಕ್ಕೆ ಇಳಿಸಬೇಕೆಂಬುದು ಅವರ ಪ್ರಬಲ ಬೇಡಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕುಮಾರಸ್ವಾಮಿ ಕಣಕ್ಕೆ ಇಳಿಯಲಿ ಎಂಬ ಬಿಜೆಪಿಯವರ ನಿರೀಕ್ಷೆಗೆ ಜೆಡಿಎಸ್‌ನಿಂದ ಸ್ಪಂದನೆ ಸಿಕ್ಕಿಲ್ಲ. ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿಯ ಬಲವಿಲ್ಲದೆ ಕುಮಾರಸ್ವಾಮಿ ಸ್ವತಂತ್ರವಾಗಿ ಯಾವ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ ಬಿಜೆಪಿ ಕೇಂದ್ರೀಯ ನಾಯಕರು ಕೊಟ್ಟಷ್ಟು ಆದ್ಯತೆಯನ್ನು ರಾಜ್ಯ ನಾಯಕರು ನೀಡುತ್ತಿಲ್ಲ ಎಂಬ ಬೇಸರ ಕುಮಾರಸ್ವಾಮಿಯವರದು.
ಈ ಎಲ್ಲ ವಿಚಾರಗಳು ವರಿಷ್ಠರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದ ಮಧ್ಯೆ ಹೊಂದಾಣಿಕೆ ಸಾಧಿಸುವ ಅನಿವಾರ್ಯ ರಾಷ್ಟ್ರೀಯ ನಾಯಕರ ಮುಂದಿದ್ದು, ಜಂಟಿ ಸಭೆಗೆ ಸೂಚನೆ ನೀಡುವ ಸಾಧ್ಯತೆ ಹೆಚ್ಚಿದೆ.