Advertisement

ಇಂದು ಕುಮಾರ ಪದಗ್ರಹಣ ಪರಮೇಶ್ವರ್‌ ಕೂಡ ಪ್ರಮಾಣ

06:00 AM May 23, 2018 | |

ಬೆಂಗಳೂರು: ರಾಜ್ಯದ 25ನೇ ಮುಖ್ಯಮಂತ್ರಿ ಯಾಗಿ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ವಿಧಾನಸೌಧದ ಮುಂಭಾಗ ಸಂಜೆ 4.30ಕ್ಕೆ ರಾಜ್ಯಪಾಲ ವಜೂಭಾ ವಾಲಾ ಅವರು ಕುಮಾರಸ್ವಾಮಿ ಅವರಿಗೆ ಅಧಿಕಾರದ ಪ್ರಮಾಣವಚನ ಬೋಧಿಸಲಿದ್ದಾರೆ. ಇವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್‌ ಅವರು ಕಾಂಗ್ರೆಸ್‌ ವತಿಯಿಂದ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ.

Advertisement

ಇದರೊಂದಿಗೆ 1 ವಾರದ ಅವಧಿಯಲ್ಲಿ ರಾಜ್ಯ 2ನೇ ಮುಖ್ಯಮಂತ್ರಿಯನ್ನು ಕಾಣುವಂತಾಗಿದೆ. 2006ರಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಸರಕಾರದಲ್ಲಿ 20 ತಿಂಗಳು ಸಿಎಂ ಆಗಿದ್ದ ಕುಮಾರಸ್ವಾಮಿ ಈಗ ಎರಡನೇ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ.

ಮೇ 17ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿಯ ಯಡಿಯೂರಪ್ಪ ಅವರು ಬಹುಮತದ ಕೊರತೆಯಿಂದ ಮೇ 19ರಂದು ರಾಜೀನಾಮೆ ನೀಡಿದ್ದರು. ಅಂದೇ ರಾಜ್ಯಪಾಲರು ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ರಚಿಸುವಂತೆ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದು, ಅದರಂತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಕುಮಾರಸ್ವಾಮಿ ಮಾತ್ರ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಹೇಳಲಾಗುತ್ತಿದ್ದರೂ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೂ ಆಗಮಿಸುತ್ತಿರುವುದರಿಂದ ಆ ಪಕ್ಷದಿಂದಲೂ ಒಬ್ಬರು ಪ್ರಮಾಣವಚನ ಸ್ವೀಕರಿಸಬೇಕು ಎಂದು ನಿರ್ಧರಿಸಿ ಪರಮೇಶ್ವರ್‌ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಮೂಲಗಳು ಹೇಳಿವೆ.

ಬುಧವಾರದ ಕಾರ್ಯಕ್ರಮದ ಕುರಿತಂತೆ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ಸಂಜೆ ಕಾಂಗ್ರೆಸ್‌ ಮುಖಂಡರಾದ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರೊಂದಿಗೆ ಸಭೆ ನಡೆಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮಾಣವಚನ ಸ್ವೀಕಾರ ಸಮಾರಂಭದ ಬಗ್ಗೆ ಮಾತ್ರ ಸಭೆಯಲ್ಲಿ ಚರ್ಚಿಸಲಾಗಿದೆ. ನಾನು ಮತ್ತು ಪರಮೇಶ್ವರ್‌ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದೇವೆ. ಸಚಿವ ಸಂಪುಟ ಬಗ್ಗೆ ಬಳಿಕ ಚರ್ಚಿಸಲಾಗುವುದು ಎಂದು ಹೇಳಿದರು. ಈ ಮಧ್ಯೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಬಿಜೆಪಿಯ ಯಾವುದೇ ಶಾಸಕರು ಭಾಗವಹಿಸದಂತೆ ಪಕ್ಷದ ವರಿಷ್ಠರು ಸೂಚಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಸಂದೇಶವನ್ನು ಪಕ್ಷದ ಶಾಸಕರಿಗೆ ರವಾನೆ ಮಾಡಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ಬಿಜೆಪಿ ಜನವಿರೋಧಿ ದಿನ ಆಚರಿಸುತ್ತಿದೆ.

ಚಾಮುಂಡೇಶ್ವರಿ ದರ್ಶನ ಪಡೆಯಲಿರುವ ಎಚ್‌ಡಿಕೆ
ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಎಚ್‌. ಡಿ. ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ ಮೈಸೂರಿಗೆ ತೆರಳಲಿರುವ ಕುಮಾರಸ್ವಾಮಿ, ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಾರೆ. ಬಳಿಕ ರಾಮನಗರಕ್ಕೆ ಬಂದು ಅಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.

Advertisement

ಲಕ್ಷಕ್ಕೂ ಹೆಚ್ಚು  ಜನ  ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಧಾನಸೌಧದ ಮುಂಭಾಗ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ವೇದಿಕೆಯ ಅಕ್ಕಪಕ್ಕದಲ್ಲಿ ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ವಿಧಾನಸೌಧದ ಮುಭಾಗದ ರಸ್ತೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಇಂಡಿಯನ್‌ ಎಕ್ಸ್‌ ಪ್ರಸ್‌ ವೃತ್ತದಿಂದ ಕೆ.ಆರ್‌.ವೃತ್ತದವರೆಗೆ ಮತ್ತು ಲಾಲ್‌ಬಾಗ್‌ ಗೇಟ್‌ಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ರಮೇಶ್‌ಕುಮಾರ್‌ ಸ್ಪೀಕರ್‌
ವಿಧಾನಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ.ಆರ್‌. ರಮೇಶ್‌ಕುಮಾರ್‌ ಅವರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ವಿಧಾನಸಭೆ ಅಧ್ಯಕ್ಷರಾಗಿ ರಮೇಶ್‌ಕುಮಾರ್‌ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ. ಉಪಾಧ್ಯಕ್ಷ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಗುರುವಾರ ಬಹುಮತ ಸಾಬೀತಿಗೆ ಮುನ್ನ ಸ್ಪೀಕರ್‌ ನೇಮಕ ಪ್ರಕ್ರಿಯೆ ನಡೆಯಲಿದೆ.

ನಾಳೆ ಬಹುಮತ ಸಾಬೀತು
ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿ ಪ್ರಮಾಣವಚನ ಸ್ವೀಕರಿಸಲಾಗುವುದು ಎಂದು ಕುಮಾರಸ್ವಾಮಿ ಮೊದಲೇ ಹೇಳಿದ್ದರು. ಅದರಂತೆ ಗುರುವಾರ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್‌ ನಾಯಕರು ಮತ್ತು ಕುಮಾರಸ್ವಾಮಿ ಮಧ್ಯೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸೋನಿಯಾ, ರಾಹುಲ್‌ ಸೇರಿ ಹಲವು ಗಣ್ಯರು
ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್‌ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಹಿತ ನಾಲ್ವರು ಮುಖ್ಯಮಂತ್ರಿಗಳು ಹಾಗೂ ಇತರ ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ.

ಸೋನಿಯಾ, ರಾಹುಲ್‌ ಅವರಲ್ಲದೆ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಬಿಎಸ್‌ಪಿ ನಾಯಕಿ ಮಾಯಾವತಿ, ಉತ್ತರ ಪ್ರದೇಶದ ಮಾಜಿ ಸಿಎಂ ಅಖೀಲೇಶ್‌ ಯಾದವ್‌, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಪುತ್ರ ತೇಜಸ್ವಿ ಯಾದವ್‌, ಕೇಂದ್ರದ ಮಾಜಿ ಸಚಿವ ಅಜಿತ್‌ ಸಿಂಗ್‌, ನಟ ಕಮಲ್‌ಹಾಸನ್‌ ಆಗಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next