ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಲಿ ಎಂದು ಸಾಣೆಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿಗಳು ಮಠಾಧೀಶರು ಕಾವಿ ಕಳಚಿ ರಾಜಕೀಯಕ್ಕೆ ಬರಲಿ ಎನ್ನುವ ಮೂಲಕ ಮಠಾಧೀಶರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸೋಮವಾರ ತಾಲೂಕಿನ ಹುಲ್ಲೇಹಾಳ್ ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸಾಣೇಹಳ್ಳಿ ಮಠದ ಭಕ್ತ, ರೈತ ಮುಖಂಡ ಬಸ್ತಿಹಳ್ಳಿ ಸುರೇಶ್ ಬಾಬು ಮಾತನಾಡಿ, ಸಾಣೇಹಳ್ಳಿ ಶ್ರೀಗಳು ಮನಸ್ಸಿನಲ್ಲಿರುವುದನ್ನು ಬಿಚ್ಚಿ ಹೇಳಿರುವುದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದರಿಂದ ಭಕ್ತ ಸಮೂಹ ಹಾಗೂ ಸ್ವಾಮೀಜಿಗಳ ಮನಸ್ಸಿಗೆ
ನೋವುಂಟಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಬಹಿರಂಗವಾಗಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸ್ಥಾನದಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಮಠಾಧೀಶರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ ಆರಂಭದಲ್ಲಿ ಒಬ್ಬರೇ ಕುಳಿತು ಪ್ರತಿಭಟನೆ ಮಾಡಿದರು. ನಂತರ ಸಾವಿರಾರು ಜನರು ಗಾಧೀಜಿಯವರ ಜೊತೆ ಸೇರಿಕೊಂಡರು. ಅದೇ ರೀತಿ ಸಹಸ್ರಾರು ಭಕ್ತರೊಂದಿಗೆ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ. 1996ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ, ಸಿರಿಗೆರೆ ಶ್ರೀಗಳ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಕ್ಕೆ ಪ್ರತಿಭಟನೆ ನಡೆಸಿ ಚುರುಕು ಮುಟ್ಟಿಸಲಾಗಿತ್ತು ಎಂದು ನೆನಪಿಸಿಕೊಂಡರು.
ಗ್ರಾಮದ ಮುಖಂಡ ನಾರಪ್ಪ ಮಾತನಾಡಿ, ಚುನಾವಣೆ ಮೊದಲು ರಾಜಕಾರಣಿಗಳು ಪ್ರಣಾಳಿಕೆ ಬಿಡುಗಡೆ ಮಾಡುವುದು ಸಹಜ. ಆದರೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದನ್ನು ಮರೆಯಬಾರದು. ಆಶ್ವಾಸನೆಗಳನ್ನು ನೀಡುವ ಮೊದಲು ಸಾಧಕ-ಬಾಧಕಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂದರು.
ಸಾಲದ ಸುಳಿಗೆ ಸಿಲುಕಿ ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವುದಕ್ಕಾಗಿ ಸಾಲ ಮನ್ನಾ ಮಾಡಲಿ ಎಂದು ಸಾಣೇಹಳ್ಳಿ ಶ್ರೀಗಳು ಹೇಳಿದ್ದರಲ್ಲಿ ಯಾವ ದುರುದ್ದೇಶವೂ ಇಲ್ಲ ಎಂಬುದನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಮಠಾಧೀಶರು ರಾಜಕಾರಣ ಮಾಡುವುದಾದರೆ ಕಾವಿ ಬಿಚ್ಚಿಟ್ಟು ಬರಲಿ ಎಂದು ಅಪಹಾಸ್ಯ ಮಾಡಿರುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನಿಸುವ ಹಕ್ಕಿದೆ. ಮುಖ್ಯಮಂತ್ರಿ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಹುಲ್ಲೇಹಾಳ್ ಗ್ರಾಮದ ಮುಖಂಡರಾದ ಜಿ.ಎನ್. ಚಂದ್ರಶೇಖರಪ್ಪ, ಕೆ.ಎಚ್. ಅಜ್ಜಪ್ಪ, ಹರೀಶ್, ಎಲ್.ಆರ್.ಕೆ.
ಸ್ವಾಮಿ, ಕೆ.ಆರ್. ಅಜ್ಜಯ್ಯ, ಬಿ.ಕೆ. ಶಿವಕುಮಾರ್, ಬಸವನಗೌಡ, ಆರ್.ಜೆ. ಬಸವರಾಜು, ಬಿ.ಎನ್. ಕುಬೇರಪ್ಪ, ಅರುಣಕುಮಾರ್, ಚಿಗಟೇರಪ್ಪ, ನಾಗರಾಜ, ನಾರಪ್ಪ, ಷಣ್ಮುಖಪ್ಪ, ಮರುಳಸಿದ್ದಪ್ಪ, ಚಂದ್ರಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಮತ್ತೂಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಮಠಾಧೀಶರು ಯಾವ ಪಕ್ಷದ ಪರ-ವಿರೋಧವಾಗಿ ಇರುವುದಿಲ್ಲ. ಹೊಸ ಸರ್ಕಾರಗಳು ಬಂದಾಗ ಕೆಲವೊಮ್ಮೆ ಸಲಹೆಗಳನ್ನು ನೀಡಬೇಕಾಗುತ್ತದೆ. ಹಾಗಾಗಿ ಕಷ್ಟದಲ್ಲಿರುವ ರೈತರ ನೆರವಿಗೆ ಸಾಲ ಮನ್ನಾ ಮಾಡಿ ಎಂದು ಸಾಣೇಹಳ್ಳಿ ಶ್ರೀಗಳು ಸಲಹೆ ನೀಡಿದ್ದಾರೆ.
ಮಹಂತಪ್ಪ, ಹುಲ್ಲೇಹಾಳ್ ಗ್ರಾಮದ ಮುಖಂಡ