Advertisement

ದ.ಕ. ಸಮಗ್ರ ಅಭಿವೃದ್ಧಿಗೆ ಶೀಘ್ರ ಸಭೆ: ಸಿಎಂ

03:50 AM Sep 08, 2018 | Team Udayavani |

ಮಂಗಳೂರು: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸುವ ನಿಟ್ಟಿನಲ್ಲಿ ಶೀಘ್ರ ಬೆಂಗಳೂರಿನಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ವಿಶೇಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಗಳೂರಿನಲ್ಲಿ ದ.ಕ.ಜಿ. ಪಂ. ಸಭಾಂಗಣದಲ್ಲಿ ಶುಕ್ರವಾರ ಸಂಜೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರಕಾರ ದ.ಕ. ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ. ಆರ್ಥಿಕ ಚಟುವಟಿಕೆ ವಿಸ್ತರಣೆ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು 20 ದಿನಗಳೊಳಗೆ ಮತ್ತೆ ಮಂಗಳೂರಿಗೆ ಮತ್ತೆ ಆಗಮಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಇನ್ನೊಂದು ಸುತ್ತಿನ ಸಭೆ ನಡೆಸುವುದಾಗಿ ತಿಳಿಸಿದರು.

Advertisement

94 ಸಿ ಅರ್ಜಿ ತಿರಸ್ಕರಿಸಬೇಡಿ
94 ಸಿ ಅಡಿಯಲ್ಲಿ ಬಡವರಿಗೆ ಮನೆ ನಿವೇಶನ ನೀಡಲು ಅರಣ್ಯ ಭೂಮಿ ನಿಯಮ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ  ಕಾಯ್ದೆ ತಿದ್ದುಪಡಿಗೆ ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಲಾಗಿದ್ದು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು 94 ಸಿ ಅರ್ಜಿಗಳನ್ನು ತಿರಸ್ಕರಿಸದೆ ಮುಂದಿನ ತೀರ್ಮಾನವರೆಗೆ ಹಾಗೆಯೇ ಬಾಕಿ ಇರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದರು.

ಎಂಡೋ ಸಮಗ್ರ ವರದಿಗೆ ಸೂಚನೆ
ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ  ಸಮಗ್ರ ವರದಿಯೊಂದನ್ನು ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ. ಬಳಿಕ ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಮಳೆ ಹಾನಿಗೆ ಪರಿಹಾರ 
ಜಿಲ್ಲೆಯಲ್ಲಿ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಆದ ಪ್ರಾಣಹಾನಿ, ಜಾನುವಾರು ಹಾಗೂ ಮನೆಗಳಿಗೆ ಆಗಿರುವ ಹಾನಿಗೆ ತತ್‌ಕ್ಷಣ ಪರಿಹಾರ ನೀಡಲಾಗಿದೆ. ಮನೆಗಳಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯನ್ನು ಸಡಿಲಗೊಳಿಸಿ ಹೆಚ್ಚಿನ ಪರಿಹಾರಗಳನ್ನು ನೀಡಲಾಗಿದೆ. ರಸ್ತೆ, ಸೇತುವೆ ಸೇರಿದಂತೆ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಸುಮಾರು 238 ಕೋ.ರೂ. ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಸುಮಾರು 19,000 ಹೆ. ಪ್ರದೇಶದಲ್ಲಿ ಅಡಿಕೆ ರಬ್ಬರು, ಕಾಳುಮೆಣಸು ಬೆಳೆಗಳಿಗೂ ರೋಗಬಾಧೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಸೂಕ್ತ ಪರಿಹಾರಕ್ಕೆ ಮುಂದಾಗಲಾಗುವುದು ಎಂದರು.  

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ, ವಿಧಾನ ಪರಿಷತ್‌ ಸದಸ್ಯರಾದ ಬಿ.ಎಂ. ಫಾರೂಕ್‌, ಹರೀಶ್‌ ಕುಮಾರ್‌, ಬೋಜೆಗೌಡ, ಮೇಯರ್‌ ಭಾಸ್ಕರ್‌ ಕೆ., ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿಲ್ಲಾ ಎಸ್ಪಿ ಡಾ| ರವಿಕಾಂತೇಗೌಡ ಉಪಸ್ಥಿತರಿದ್ದರು.

Advertisement

ಪ್ರಗತಿ ಪರಿಶೀಲನಾ ಸಭೆ
ಪ್ರಗತಿ ಪರಿಶೀಲನ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದರು. ನಳಿನ್‌ ಕುಮಾರ್‌ ಕಟೀಲು, ಅಂಗಾರ, ಸಂಜೀವ ಮಠಂದೂರು, ಹರೀಶ್‌ ಪೂಂಜ, ರಾಜೇಶ್‌ ನಾೖಕ್‌, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಶ್ರೀನಿವಾಸ ಪೂಜಾರಿ, ಬಿ.ಎಂ. ಫಾರೂಕ್‌, ಹರೀಶ್‌ ಕುಮಾರ್‌, ಬೋಜೇಗೌಡ, ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು.

ಎತ್ತಿನ ಹೊಳೆ ಅಕ್ರಮ ವಿರುದ್ಧ ಕ್ರಮಕ್ಕೆ ಬದ್ಧ: ಎಚ್‌ಡಿಕೆ
ಎತ್ತಿನ ಹೊಳೆ ಯೋಜನೆ ಅನುಷ್ಠಾನದಲ್ಲಿ ಏನಾದರೂ ಅಕ್ರಮ ನಡೆದಿದ್ದರೆ ಕಾನೂನು ರೀತಿಯ ಕ್ರಮಕೈಗೊಳ್ಳಲು ಈಗಲೂ ಬದ್ಧ ಎಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಹೇಳಿಕೆ ಬಗ್ಗೆ  ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಗಮನಹರಿಸಲು ನನಗೆ ಸ್ವಲ್ಪ ಕಾಲಾವಕಾಶ ಬೇಕು. ಪ್ರಸ್ತುತ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಗಮನ ಕೊಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಪಶ್ಚಿಮಘಟ್ಟದಲ್ಲಿ ಡಾ| ಕಸ್ತೂರಿ ರಂಗನ್‌ ವರದಿ ಜಾರಿ ಕುರಿತಂತೆ ಉತ್ತರಿಸಿ, ಪಶ್ಚಿಮ ಘಟ್ಟದ ಭಾಗದಲ್ಲಿ ಆಗಿರುವ ಅನಾಹುತಗಳು ಜನರಲ್ಲಿ ಆತಂಕ ಸೃಷ್ಟಿಸಿದೆ. ಯಾವ ಕಾರಣಕ್ಕೆ ಆಗಿದೆ ಎಂಬ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ವರದಿಯಲ್ಲಿ ಇರುವ ವೈಜ್ಞಾನಿಕ ಸಲಹೆಗಳನ್ನು ಹಾಗೂ ಹೈದರಬಾದ್‌ನ ತಜ್ಞರ ಸಮಿತಿ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನಳಿನ್‌-ಭೋಜೇಗೌಡ ಮಾತಿನ ಚಕಮಕಿ 
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಳೆಹಾನಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಹಾಗೂ ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಅವರ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ. ಅಡಿಕೆ ಕೊಳೆ ರೋಗ ವಿಚಾರದಲ್ಲಿ ರಾಜಕೀಯ ಮಾಡದೆ ನಿಷ್ಪಕ್ಷಪಾತವಾಗಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಸಂಸದ ನಳಿನ್‌ ಒತ್ತಾಯಿಸಿದರು. ಈ ವೇಳೆ ಇಬ್ಬರ ಮಧ್ಯೆ ಮಾತು ಬೆಳೆದಿದೆ. ಕೊನೆಗೆ ಸಿಎಂ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿದರು ಎಂದು ಮೂಲಗಳು ಹೇಳಿವೆ. ಇನ್ನೊಂದೆಡೆ, ಜಿಲ್ಲೆಯ ಶಾಸಕರ ವಾಹನಗಳಿಗೆ ಜಿಲ್ಲಾ ಪಂಚಾಯತ್‌ ಆವರಣದೊಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿತ್ತು. ಇದು ಬಿಜೆಪಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು ಸಿಎಂ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಅವರನ್ನೂ ಕುಮಾರಸ್ವಾಮಿ ಸಮಾಧಾನ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next