ಲಿಂಗಸುಗೂರು: 2023ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಜೆಡಿಎಸ್ ಕಲ್ಯಾಣ ಕರ್ನಾಟಕ ಉಸ್ತುವಾರಿ ಕರಿಯಮ್ಮ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ದೊಡ್ಡ ಹನುಮಂತ ದೇವರ ದೇವಸ್ಥಾನ ಮುಂಭಾಗದಲ್ಲಿ ಏರ್ಪಡಿಸಿದ್ದ ಜಲಧಾರೆ ಜಲಯಾತ್ರೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೃಷ್ಣಾ ತುಂಗಾಭದ್ರ ನದಿ ಹರಿಯುತ್ತಿದ್ದರೂ ಕುಡಿವ ನೀರಿಗಾಗಿ ಹಾಗೂ ಸಮರ್ಪಕ ನೀರಾವರಿ ಸೌಲಭ್ಯಗಳು ಇಲ್ಲದೆ ಇಲ್ಲಿನ ರೈತರು, ಜನ ಪರದಾಡುವಂತಾಗಿದೆ.
ರೈತರ ಪರ ಕಾಳಜಿ ಇರುವ ಪಕ್ಷ ಇದ್ದರೆ ಅದು ಜೆಡಿಎಸ್ ಪಕ್ಷವಾಗಿದೆ. ರಾಷ್ಟ್ರೀಯ ಪಕ್ಷಗಳು ರಾಜ್ಯದ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೇ ನಿಷ್ಕಾಳಜಿಯಿಂದ ನಡೆದುಕೊಳ್ಳುತ್ತೇವೆ. ನೀರಾವರಿ ಯೋಜನೆಗಳಲ್ಲಿ ಕೆಲವೊಂದು ಅಂತರ್ ರಾಜ್ಯ ಜಲವಿವಾದ ಸುಳಿಯಲ್ಲಿ ಸಿಕ್ಕಿ ರಾಜ್ಯಕ್ಕೆ ಅನ್ಯಾಯವಾಗಿದೆ. ಜೆಡಿಎಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದರೆ ಕೃಷ್ಣಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿದೆ. ಕ್ಷೇತ್ರದಲ್ಲಿ ಎರಡು ಭಾರಿ ಸೋತರೂ ಕ್ಷೇತ್ರದ ಜನತೆ ನಿರಂತರ ಸಂಪರ್ಕದಲ್ಲಿದ್ದು, ಜನತೆ ನೋವು ನಲಿವುಗಳಲ್ಲಿ ಭಾಗಿಯಾಗುತ್ತಿರುವ ಸಿದ್ದು ಬಂಡಿ ಅವರನ್ನು 2023 ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಜೊತೆ ಎಚ್ .ಡಿ. ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಆಗಿ ಮಾಡಲು ಕ್ಷೇತ್ರದ ಜನತೆ ಆಶೀರ್ವಾದ ಮಾಡಬೇಕು ಎಂದರು.
ಜೆಡಿಎಸ್ ಮುಖಂಡರಾದ ಮಹಾಂತೇಶ ಅತ್ನೂರು, ಸಿದ್ದು ಬಂಡಿ, ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ, ಜೆಡಿಎಸ್ ತಾಲೂಕಾಧ್ಯಕ್ಷ ಕೆ.ನಾಗಭೂಷಣ, ಬಸವರಾಜ ಮಾಕಾಪುರ, ಮಲ್ಲಿಕಾರ್ಜುನ ಅಮ್ಮಾಪುರ, ಸಿದ್ದು ಬಡಿಗೇರ, ಹುಲಗಪ್ಪ ನಾಯಕ ಇದ್ದರು.