ಚಿಕ್ಕಬಳ್ಳಾಪುರ: ಉಪ ಚುನಾವಣೆಯ ಬಳಿಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಅದನ್ನೂ ಎದುರಿಸಲು ಜೆಡಿಎಸ್ ಪಕ್ಷ ಸಿದ್ದವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಎ.ರಾಮಕೃಷ್ಣ ಪರ ಮತಯಾಚನೆ ನಡೆಸಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಪದೇ ಪದೇ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಸಿದ್ದವಾಗಿದೆ ಎಂಬ ಹೇಳಿಕೆ ನೀಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆ ಫಲಿತಾಂಶ ಬರುವವರೆಗೂ ಏನು ಹೇಳಕ್ಕೆ ಆಗುವುದಿಲ್ಲ, ಆದರೆ ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಎದುರಿಸಲು ನಾವು ಸಿದ್ದರಿದ್ದೇವೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಮಾಡಲು ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದರು. ಅನರ್ಹ ಶಾಸಕ ಸುಧಾಕರ್ ನನ್ನ ಮೇಲೆ ಎಷ್ಟೇ ಆರೋಪ ಮಾಡಿದರೂ ಕ್ಷೇತ್ರದ ಜನರಲ್ಲಿ ನನ್ನ ಮೇಲೆ ಇರುವ ವಿಶ್ವಾಸವನ್ನು ಕಿತ್ತುಕೊಳ್ಳುಲು ಸಾಧ್ಯವಿಲ್ಲ ಎಂದರು.
ಉಪ ಚುನಾವಣೆ ಅಕಸ್ಮಿಕವಾಗಿ ಬಂದಿಲ್ಲ. ಬಿಜೆಪಿ ನಡೆಸಿದ ಅನೈತಿಕ ರಾಜಕಾರಣದಿಂದ ಬಂದಿದೆ ಎಂದರು. ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ದಿನವು ಸಂತೋಷವಾಗಿರಲಿಲ್ಲ. ಆರಂಭದಿಂದ ನನ್ನನ್ನು ಕೆಳಗಿಳಿಸುವ ಪ್ರಯತ್ನ ನಡೆಸಿದರು. ಆದರೆ ರೈತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ಎಲ್ಲವನ್ನು ಸಹಿಸಿಕೊಂಡು ಬಂದೆ ಎಂದರು. ಅಧಿಕಾರ ನಶ್ವರ, ಆದರೆ ಪ್ರತಿ ಬಾರಿಯು ಕೂಡ ಅಧಿಕಾರಕ್ಕೆ ಬರುವ ಸಲುವಾಗಿ ಕುರಿ, ಮೇಕೆ, ಆಡುಗಳನ್ನು ಖರೀದಿಸುವ ರೀತಿಯಲ್ಲಿ ಶಾಸಕರನ್ನು ಖರೀದಿ ಮಾಡಿದರು. ಇದು ಯಡಿಯೂರಪ್ಪ ಚಾಳಿ ಎಂದರು
ಮೈತ್ರಿ ಸರ್ಕಾರ ಬೀಳಲು ಅನರ್ಹ ಶಾಸಕ ಸುಧಾಕರ್ ಪ್ರಮುಖ ಕಾರಣ. ಇಂತಹ ಹಣದ ಅಹಂ ಇರುವ ವ್ಯಕ್ತಿಯನ್ನು ತಿರಸ್ಕಾರ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಶಾಸಕರಾದ ಜೆಕೆ ಕೃಷ್ಣಾರೆಡ್ಡಿ, ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಅಭ್ಯರ್ಥಿ ಎ.ರಾಮಕೃಷ್ಣ, ಮಾಜಿ ಶಾಸಕ ಬಚ್ಚೇಗೌಡ, ಜಿಪಂ ಸದಸ್ಯ ಮುನೇಗೌಡ, ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.