ಬೆಂಗಳೂರು: ಜೆಡಿಎಸ್‌ನಲ್ಲಿರುವ “ಬಕೆಟ್ ಕಳ್ಳರು’ ನನ್ನ ವಿರುದ್ಧ ಷಡ್ಯಂತ್ರ ನಡೆಸಿದರು ಎಂಬ ಪ್ರಜ್ವಲ್ ರೇವಣ್ಣ ಹೇಳಿಕೆ ಪಕ್ಷದ ವಲಯದಲ್ಲಿ ಅಸಮಾಧಾನ ಮೂಡಿಸಿದೆ.
ಖುದ್ದು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೇ ಪ್ರಜ್ವಲ್ ರೇವಣ್ಣ ಹೇಳಿಕೆ ಬಗ್ಗೆ ಗರಂ ಆಗಿದ್ದು, ಪದೇಪದೆ ಇಂತಹ ಹೇಳಿಕೆ ಕೊಡುವ ಮೂಲಕ ಪಕ್ಷದ ಶಕ್ತಿ ಕುಗ್ಗಿಸುವ ಕೆಲಸ ಆಗುತ್ತಿದೆ ಎಂದು ಬೇಸರಗೊಂಡಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಬಳಿ ಅತೃಪ್ತಿ ಹೊರ ಹಾಕಿರುವ ಕುಮಾರಸ್ವಾಮಿ, ಪ್ರಜ್ವಲ್ ಕರೆದು ತಾಕೀತು ಮಾಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಹುಣಸೂರಿನ ಸಭೆಯೊಂದರಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ಹೇಳಿದ್ದರು. ಇದೀಗ ಪಕ್ಷದಲ್ಲಿ ಬಕೆಟ್ ಕಳ್ಳರು ಇದ್ದಾರೆ ಎಂದು ಮಾತನಾಡಿದ್ದಾರೆ. ಜನರಲ್ಲಿ ಪಕ್ಷದ ಬಗ್ಗೆ ಯಾವ ಅಭಿಪ್ರಾಯ ಮೂಡುತ್ತದೆ. ಇಂತಹ ಹೇಳಿಕೆಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ಆಹಾರವಾಗುತ್ತಿದೆ. ಇದಕ್ಕೆ ಕಡಿವಾಣಹಾಕಬೇಕು ಎಂದು ಜೆಡಿಎಸ್‌ನ ಹಿರಿಯ ನಾಯಕರು ಎಚ್.ಡಿ.ದೇವೇಗೌಡರ ಬಳಿ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪ್ರಜ್ವಲ್ ಮಾತನಾಡಿರುವುದನ್ನು ಗಮನಿಸಿದ್ದೇನೆ. ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ಟಿಕೆಟ್ ಕೇಳಿಲ್ಲ. ಆಕಾಂಕ್ಷಿಗಳ ಸಭೆಗೂ ಬರಲಿಲ್ಲ. ಆ ಕ್ಷೇತ್ರದಿಂದ ನಾಲ್ವರು ಆಕಾಂಕ್ಷಿಗಳಿದ್ದಾರೆ.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ