Advertisement

ಕರ್ನಾಟಕಕ್ಕೆ ಕುಮಾರಣ್ಣ’ಯುವ ಜೆಡಿಎಸ್‌ ಟಾರ್ಗೆಟ್‌

10:08 AM May 07, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್‌ ಈಗಾಗಲೇ ವಿವಿಧ ರೀತಿಯ ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ ಜೆಡಿಎಸ್‌ ಯುವ ಘಟಕ “ಕರ್ನಾಟಕಕ್ಕೆ ಕುಮಾರಣ್ಣ’ ಹೆಸರಿನಲ್ಲಿ ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸಿ ಯುವಜನತೆ ಸೆಳೆಯಲು ಸಜ್ಜಾಗಿದೆ.

Advertisement

ನಗರದಲ್ಲಿ ಶನಿವಾರ ನಡೆದ ಜೆಡಿಎಸ್‌ ಯುವ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ “ಕರ್ನಾಟಕಕ್ಕೆ ಕುಮಾರಣ್ಣ’ ಹೆಸರಿನಲ್ಲಿ ರಾಜ್ಯದೆಲ್ಲೆಡೆ ಸಮಾವೇಶ ನಡೆಸಲು ನಿರ್ಧರಿಸಲಾಯಿತು. ವಿಧಾನಸಭಾ ಕ್ಷೇತ್ರವಾರು ಪ್ರವಾಸಗಳನ್ನು ನಡೆಸಿ ವಿಭಾಗವಾರು ಸಮಾವೇಶ ನಡೆಸುವ ಮೂಲಕ ಯುವಜನತೆಯನ್ನು ಸೆಳೆಯುವುದು ಇದರ ಉದ್ದೇಶವಾಗಿದೆ.

ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ಗ್ರಾಮ ವಾಸ್ತವ್ಯ, ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ ಕೊಡುಗೆಗಳ ಬಗ್ಗೆ ಯುವಜನತೆಗೆ ಮಾಹಿತಿ ನೀಡುವುದು, ಸಾಮಾಜಿಕ ಜಾಲತಾಣಗಳ ಮೂಲಕ ಕುಮಾರಸ್ವಾಮಿ ಅವರ ಕೊಡುಗೆಗಳ ಬಗ್ಗೆ ಪ್ರಚಾರ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರಾಜ್ಯಾದ್ಯಂತ ಸಮಾವೇಶ ನಡೆಸಲು ಹಾಗೂ ಯುವಜನತೆಯನ್ನು ಸಂಘಟಿಸಲು ಯುವ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು.

ಸಭೆ ಬಳಿಕ ಮಾತನಾಡಿದ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಪಕ್ಷದ ರಾಜ್ಯಾಧ್ಯಕ್ಷರಾದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುವುದೇ ನಮ್ಮ ಗುರಿ. ಅದರಂತೆ ಯುವಜನತೆಯನ್ನು ಸಂಘಟಿಸಲು “ಕರ್ನಾಟಕಕ್ಕೆ ಕುಮಾರಣ್ಣ’ ಎಂಬ ಹೆಸರಿನಲ್ಲಿ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಗಿದೆ. ಕುಮಾರಸ್ವಾಮಿ ಅವರ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

“ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ ದೆಹಲಿಯಲ್ಲಿವೆ. ಆದರೆ ನಮ್ಮ ಕುಮಾರಣ್ಣನವರು ರಾಜ್ಯದಲ್ಲೇ ಸಿಗುತ್ತಾರೆ. ರಾಷ್ಟ್ರೀಯ ಪಕ್ಷಗಳು ಕಾವೇರಿ, ಮಹದಾಯಿ ಜಲವಿವಾದ ಪರಿಹರಿಸಿಕೊಳ್ಳಲು ದೆಹಲಿಯತ್ತ ಮುಖ ಮಾಡುತ್ತವೆ. ಆದರೆ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ಶಕ್ತಿ ನಮ್ಮ ಕೈಯಲ್ಲೇ ಇರಲಿದ್ದು, ಈ ಬಗ್ಗೆ ಅರಿವು ಮೂಡಿಸಲಾಗುವುದು. ರೈತರ ಸಾಲಮನ್ನಾ, ಯುವಜನತೆಗೆ ಉದ್ಯೋಗ ಸೃಷ್ಟಿಸುವಂತಹ ದೂರದೃಷ್ಟಿ ಇಟ್ಟುಕೊಂಡಿರುವ ಕುಮಾರಣ್ಣನವರ ಕೊಡುಗೆಗಳನ್ನು ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡ‌ಲಾಗುವುದು’ ಎಂದು ತಿಳಿಸಿದರು.

Advertisement

“ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯಲ್ಲಿ ಈಗಿನಿಂದಲೇ ಕಚ್ಚಾಟ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಿದಂತೆ ಕರ್ನಾಟಕದಲ್ಲೂ ಸಂಪೂರ್ಣ ಬಹುಮತ ಪಡೆಯುವ ಭ್ರಮೆಯಲ್ಲಿ ಬಿಜೆಪಿಯಿದೆ. ಆದರೆ ಕರ್ನಾಟಕದಲ್ಲಿ ಆ ರೀತಿ ನಡೆಯಲು ಸಾಧ್ಯವಿಲ್ಲ. 20 ತಿಂಗಳ ಅಧಿಕಾರಾವಧಿಯಲ್ಲಿ ಕುಮಾರಸ್ವಾಮಿ ಅವರ ಆಡಳಿತವನ್ನು ಪರಿಗಣಿಸಿ ಮತ ನೀಡುವಂತೆ ಮತಭಿಕ್ಷೆ ಕೇಳುತ್ತೇವೆ. ಏಕೆಂದರೆ ರಾಜ್ಯದ ಅಭಿವೃದ್ಧಿಗೆ ಕುಮಾರಣ್ಣನವರಂತಹ ನಾಯಕರ‌ ಅವಶ್ಯಕತೆಯಿದೆ. ಮುಂದಿನ ಚುನಾವಣೆಯಲ್ಲಿ ಶೇ.40ರಷ್ಟು ಟಿಕೆಟ್‌ಗಳನ್ನು ಯುವಜನತೆಗೆ ನೀಡುವಂತೆ ಕೋರಲಾಗುವುದು. ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು’ ಎಂದು ಹೇಳಿದರು.

ನಿರ್ಮಲ್‌ ಭಾರತ್‌ ಎಂಬ ಕಾರ್ಯಕ್ರಮದ ಹೆಸರು ಬದಲಾಯಿಸಿ “ಸ್ವತ್ಛ ಭಾರತ್‌’ ಎಂದು ಹೆಸರಿಡಲಾಗಿದೆ. ಸ್ವತ್ಛ ಭಾರತ್‌ ಹೆಸರಿನಲ್ಲಿ ತೆರಿಗೆ ಸಂಗ್ರಹಿಸಿದರೂ ಸ್ವತ್ಛ ನಗರಿಯಲ್ಲಿ ಬೆಂಗಳೂರು 210ನೇ ಸ್ಥಾನಕ್ಕೆ ಕುಸಿದಿದೆ. ಹಾಗಾದರೆ ಸ್ವತ್ಛತೆ ಹೆಸರಿನಲ್ಲಿ ಸಂಗ್ರಹಿಸಿದ ಹಣ ಏನಾಯಿತು? ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ನಾಯಕರು ಕಚ್ಚಾಟದಲ್ಲೇ ನಿರತರಾಗಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ರಮೇಶ್‌ಬಾಬು, ಜೆಡಿಎಸ್‌ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ನಗರ ಯುವ ಘಟಕದ ಅಧ್ಯಕ್ಷ ರಮೇಶ್‌ಗೌಡ ಇತರರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಪಕ್ಷಗಳಿಗೆ ಶನಿಕಾಟ ಶುರು
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ರಾಜ್ಯದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನಮಗೆ ಶನಿ ಕಾಟ ಬಿಟ್ಟಿದೆ. ಪಕ್ಷದ ಸ್ವಂತ ಕಚೇರಿಯೂ ಇದೆ. ಎಲ್ಲ ತಲೆನೋವುಗಳಿಂದ ಮುಕ್ತರಾಗಿದ್ದೇವೆ. ಈಗ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಶನಿಕಾಟ ಶುರುವಾಗಿದೆ ಎಂದು ಮಧು ಬಂಗಾರಪ್ಪ ಮಾರ್ಮಿಕವಾಗಿ ನುಡಿದರು. 

Advertisement

Udayavani is now on Telegram. Click here to join our channel and stay updated with the latest news.

Next