Advertisement

ಕುಮಾರಧಾರೆಯಲ್ಲಿ ಎಗ್ಗಿಲ್ಲದೆ ಮರಳು ದಂಧೆ

12:06 PM Apr 06, 2017 | Team Udayavani |

ಕಡಬ: ಕರಾವಳಿ ಭಾಗಕ್ಕೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸಲು ಸರಕಾರ ವಿಫಲವಾಗಿರುವುದರಿಂದ ಮರಳಿನ ಅಭಾವ ತಲೆದೋರಿದೆ. ಆದರೆ ಅಲ್ಲಲ್ಲಿ ಅಕ್ರಮವಾಗಿ ನಡೆಯುತ್ತಿರುವ ಯಾಂತ್ರೀಕೃತ  ಮರಳುಗಾರಿಕೆ ಮಾತ್ರ ಎಗ್ಗಿಲ್ಲದೆ ಮುಂದುವರಿದಿದೆ. ಕಡಬದ ಮರ್ದಾಳದ ಕೋರಿಯಾರ್‌ ಬಳಿ ಕುಮಾರ ಧಾರಾ ನದಿಯಿಂದ ಹಿಟಾಚಿ ಯಂತ್ರದ ಮೂಲಕ ಮರಳುಗಾರಿಕೆ ನಡೆಸಿ ನದಿಯ ಇನ್ನೊಂದು ಭಾಗದಲ್ಲಿ ಸುಳ್ಯ ತಾಲೂಕಿನ ಕೇನ್ಯ ಗ್ರಾಮದ ಓಡದಕರೆಯಲ್ಲಿ ಮರಳನ್ನು ದಾಸ್ತಾನು ಮಾಡಿ ಮಾರಾಟ ಮಾಡಲಾಗುತ್ತಿದೆ.

Advertisement

ದಾಸ್ತಾನಿಗೆ ಮಾತ್ರ ಅನುಮತಿ ಇಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಮರಳು ದಾಸ್ತಾನು ಮಾಡಲು 2 ವರ್ಷಗಳ ಅನುಮತಿ ಪಡೆದುಕೊಳ್ಳಲಾಗಿದೆ. ಆದರೆ ಯಾಂತ್ರೀಕೃತ ಮರಳುಗಾರಿಕೆ ಮಾಡುವಂತಿಲ್ಲ. ಲೋಕೋಪ ಯೋಗಿ ಇಲಾಖೆಯ ನಿಯಮದ ಪ್ರಕಾರ ಖಾಸಗಿಯವರು ಮರಳನ್ನು ಮಾರಾಟ ಮಾಡುವಂತಿಲ್ಲ. ಆದರೆ ಇಲ್ಲಿ ನದಿಯಿಂದ ಹಿಟಾಚಿ ಬಳಿಸಿ ಮರಳು ತೆಗೆದು ದಾಸ್ತಾನು ಮಾಡಿ ಇಲಾಖಾ ಷರತ್ತುಗಳನ್ನು ಉಲ್ಲಂಘಿಸಿ ಮಾರಾಟ ಮಾಡಲಾಗುತ್ತಿದೆ. ರಾತ್ರಿ ಹಗಲೆನ್ನದೆ ನೂರಾರು ಲಾರಿಗಳಲ್ಲಿ ಮರಳು ಸಾಗಾಟ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸರಕಾರದ ಬೇಜವಾಬ್ದಾರಿ: ಮರಳಿನ ಅಭಾವ ತಲೆದೋರಲು ಮತ್ತು ಅಕ್ರಮ ಮರಳು ದಂಧೆ ನಡೆಯಲು ಸರಕಾರದ ಬೇಜವಾಬ್ದಾರಿಯೇ ಕಾರಣ. ಸ್ಥಳೀಯ ಜನರು ತಮ್ಮ ಸಣ್ಣಪುಟ್ಟ ನಿರ್ಮಾಣ ಕಾಮಗಾರಿಗಳಿಗೆ ಮರಳು ಪಡೆಯಬೇಕಾದರೆ ಹರ
ಸಾಹಸ ಪಡಬೇಕು. ಅದೇ ಅಕ್ರಮ ದಂಧೆಕೋರರು ರಾಜಾರೋಷವಾಗಿ ಯಂತ್ರಗಳನ್ನು ಉಪಯೋಗಿಸಿ ಮರಳುಗಾರಿಕೆ ನಡೆಸುತ್ತಾರೆ. ಸ್ಥಳೀಯರು ಕಾರ್ಮಿಕರನ್ನು ಬಳಸಿ ಮರಳು ತೆಗೆದರೆ ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ಆದರೆ ಯಾಂತ್ರ ಬಳಸಿ ಮರಳು ತೆಗೆದು ದುಪ್ಪಟ್ಟು ದರಕ್ಕೆ ಮರಳು ಮಾರುವವರನ್ನು ಮಾತ್ರ ಕೇಳುವವರಿಲ್ಲ. ಇಲ್ಲಿ ಬಡವರಿಗೊಂದು ನೀತಿ, ಶ್ರೀಮಂತರಿಗೊಂದು ನೀತಿ ಎಂದು ಸ್ಥಳೀಯರಾದ ಹೈದರ್‌ ಮರ್ದಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಯ ತಾಲೂಕಿನ ಕೇನ್ಯ ಗ್ರಾಮದಲ್ಲಿ ಕುಮಾರಧಾರಾ ನದಿಯಿಂದ ಮರಳು ತೆಗೆದು ದಾಸ್ತಾನು ಮಾಡಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ನೀಡಿರುವ ಬಗ್ಗೆ ಮಾಹಿತಿ ಇದೆ. ಆದರೆ ಯಾಂತ್ರೀಕೃತ ಮರಳುಗಾರಿಕೆಗೆ ಅವಕಾಶ ಇಲ್ಲ. ಮರಳು ಮಾರಾಟ ಮಾಡಲು ಕೂಡ ಖಾಸಗಿಯವರಿಗೆ ಅವಕಾಶ ಇಲ್ಲ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಎಂ.ಎಂ. ಗಣೇಶ್‌, ಸುಳ್ಯ ತಹಶೀಲ್ದಾರ್‌.

ನಾಗರಾಜ್‌ ಎನ್‌.ಕೆ. ಕಡಬ

Advertisement
Advertisement

Udayavani is now on Telegram. Click here to join our channel and stay updated with the latest news.

Next