Advertisement
ಬೇಸಗೆ ಆರಂಭದಲ್ಲೇ ನದಿ ಬತ್ತುವುದನ್ನು ನೋಡಿದರೆ ಭವಿಷ್ಯದ ದಿನಗಳಲ್ಲಿ ಬರಗಾಲ ಆವರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಹಿಂದಿನ ವರ್ಷಗಳಲ್ಲಿ ಭಾರೀ ಮಳೆಯಿಂದ ಜಲ ಪ್ರಳಯವನ್ನೇ ಸೃಷ್ಟಿಸಿದ್ದ ಈ ಭಾಗದ ನದಿ, ತೊರೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಹರಿವು ಕ್ಷೀಣಿಸುತ್ತಿರುವುದು ಕಂಡು ಬರುತ್ತಿವೆ.
ಈ ಬಾರಿ ಬೇಗನೆ ನದಿ ಬತ್ತಲಾ ರಂಭಿಸಿರುವುದು ಆತಂಕವನ್ನು ಉಂಟು ಮಾಡಿದೆ. ಈ ನದಿಯಷ್ಟೆ ಬತ್ತುತ್ತಿ ರುವುದಲ್ಲ, ಈ ಭಾಗದ ಹರಿಹರ ಕೊಲ್ಲಮೊಗ್ರು, ಕಲ್ಮಕಾರು, ಮಡಪ್ಪಾಡಿ, ಗುತ್ತಿಗಾರು, ಪಂಜ, ಗುಂಡ್ಯ ಈ ಭಾಗದ ಉಪ ನದಿ, ಹೊಳೆಗಳಲ್ಲೂ ನೀರಿನ ಹರಿವು ಇಳಿಕೆ ಕಂಡಿದೆ. ಈ ನದಿಗಳೆಲ್ಲವೂ ಈ ಹಿಂದೆಲ್ಲ ಮುಂಗಾರಿನಲ್ಲಿ ಪ್ರವಾಹ ಮಟ್ಟವನ್ನೇ ಮೀರಿ ಹರಿದು ಹಲವು ಗ್ರಾಮಗಳಿಗೆ ಜಲ ದಿಗ್ಬಂಧನ ವಿಧಿಸಿದ್ದವು. ಮಾತ್ರವಲ್ಲದೆ, ಕೃಷಿ ಫಸಲನ್ನು ಬಲಿ ಪಡೆದಿದ್ದವು. ಆದರೆ, ಈ ಹೊಳೆಗಳು ಇಂದು ಬತ್ತುವುದನ್ನು ನೋಡಿದರೆ, ಪ್ರವಾಹ ಸೃಷ್ಟಿಸಿದ್ದನ್ನು ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ತಣ್ಣಗೆ ಹರಿಯುತ್ತಿವೆ. ಅತಿವೃಷ್ಟಿಯಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ಬೆಟ್ಟ ಶ್ರೇಣಿಗಳ ಕುಸಿತಕ್ಕೆ ಕಾರಣವಾದ ಜಲ ಮೂಲಗಳು ಸಂಪೂರ್ಣ ಬತ್ತಿ ಹೋಗುವ ಆತಂಕಗಳು ಗೋಚರಿಸುತ್ತಿವೆ. ಸದ್ಯಕ್ಕೆ ನೀರಿನ ಕೊರತೆಯ ಆತಂಕವಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜಲಕ್ಷಾಮದ ಸುಳಿವು ಕಂಡು ಬರುತ್ತಿವೆ. ಈ ಭಾಗದಲ್ಲಿ ನೀರಿನ ಜಲಮೂಲಗಳಾದ ಹಳ್ಳ, ಕೊಳ್ಳ, ತೊರೆಗಳಿದ್ದರೂ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ತಲೆದೋರುತ್ತದೆ. ಮಳೆ ನಿಂತು ಬೆರಳೆಣಿಕೆಯ ದಿನಗಳು ಮಾತ್ರ ಕಳೆದಿದ್ದು, ಜಿಲ್ಲೆಯಾದ್ಯಂತ ಸುಡು ಬಿಸಿಲಿನ ಹವಾಮಾನ ಕಂಡು ಬರುತ್ತಿದೆ. ಬೆಳಗ್ಗೆ ಸಾಧಾರಣ ಚಳಿಯ ವಾತಾವರಣವಿದ್ದು ಅನಂತರ ತಾಪ ಮಾನ ಏರುತ್ತಿದೆ. ದಿನದ ಉಷ್ಣಾಂಶದಲ್ಲಿ ಏರಿಕೆ ದಾಖಲಾಗುತ್ತಿದೆ.
Related Articles
ಭಾರಿ ಭೂ ಕುಸಿತ ಮತ್ತು ಉಕ್ಕೇರಿದ ಪ್ರವಾಹದಿಂದ ನದಿಗಳು ಹರಿಯುವ ದಿಕ್ಕು ಬದಲಾಯಿಸಿದ ಘಟನೆಗಳು ಪುಷ್ಪಗಿರಿ ತಪ್ಪಲಿನ ಕುಮಾರಧಾರಾ, ಕಲ್ಮಕಾರು, ಶಿರಾಡಿ ಭಾಗದಲ್ಲಿ ನಡೆದಿತ್ತು. ಭೂ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು, ಕಲ್ಲು ಬಂಡೆಗಳ ರಾಶಿ ಹಾಗೂ ಮರಗಳು ಕೂಡ ನದಿ ತೊರೆಗಳ ಒಡಲು ಸೇರಿದ್ದು, ಅವುಗಳು ನದಿಯಲ್ಲೇ ಉಳಿದಿವೆ. ಇದೂ ನೀರಿನ ಹರಿವು ಮತ್ತು ಅಂತರ್ಜಲ ಕ್ಷೀಣಿಸಲು ಮತ್ತೂಂದು ಕಾರಣವಾಗುತ್ತಿವೆ. ಕೆರೆಗಳು, ಬಾವಿಗಳು ಮಾತ್ರವಲ್ಲದೆ ಬೋರ್‌ವೆಲ್‌ಗಳಲ್ಲೂ ನೀರಿನ ಪ್ರಮಾಣ ಕೊಂಚ ಇಳಿಕೆಯಾಗುತ್ತಲಿದೆ. ಮುಂದಿನ ದಿನಗಳಲ್ಲಿ ಅಡಿಕೆ ತೋಟಗಳು ನೀರಿಲ್ಲದೆ ಒಣಗುವ ಲಕ್ಷಣಗಳು ಸಹಜವಾಗಿಯೇ ಇರುತ್ತದೆ. ಇದು ಕೃಷಿಕರನ್ನು ಕಂಗಾಲಾಗಿಸುತ್ತದೆ.
Advertisement
ಆರಂಭದಲ್ಲೇ ಮುನ್ನೆಚ್ಚರಿಕೆಜಲಪ್ರಳಯ ಸಂಭವಿಸಿದ ವೇಳೆ ನದಿಯಲ್ಲಿ ಗುಡ್ಡದ ಮಣ್ಣು ತುಂಬಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಮಾರಧಾರಾ ನದಿ ಪಾತ್ರದ ಜನವಸತಿ ಇರುವ ವ್ಯಾಪ್ತಿಯಲ್ಲಿ 1 ಕಿ.ಮೀ. ವ್ಯಾಪ್ತಿಯ ತನಕ ನದಿಯ ಹೂಳೆತ್ತುವ ಕುರಿತಂತೆ ಪಂಚಾಯತ್ ಕಡೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಧಾರಣ ಸಾಮರ್ಥ್ಯ ಹೆಚ್ಚಿಸುವ ಕ್ರಮಕ್ಕೂ ಮನವಿ ಮಾಡಿಕೊಳ್ಳಲಾಗಿದೆ. ಕುಮಾರಧಾರಾ ಸ್ನಾನ ಘಟ್ಟದ ಬಳಿ ದೇಗುಲದ ಕಿಂಡಿ ಅಣೆಕಟ್ಟು ಇದ್ದು, ಹರಿದು ಹೋಗುವ ನೀರು ಇಂಗಿಸಲು ವ್ಯವಸ್ಥೆ ಇದೆ. ನದಿಯಲ್ಲಿ ನೀರಿನ ಹರಿವು ಈಗಲೂ ಇದ್ದು, ಕೊರತೆ ಆಗದಂತೆ ಆರಂಭದಲ್ಲೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
– ಮುತ್ತಪ್ಪ , ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಒ ಬಾಲಕೃಷ್ಣ ಭೀಮಗುಳಿ