Advertisement

ಕುಮಾರ್‌ ಟೀಮ್‌ ಲೂಟಿಯಲ್ಲಿ ತಲ್ಲೀನ

10:45 AM May 17, 2019 | Suhan S |

ಹುಬ್ಬಳ್ಳಿ: ನಿಮ್ಮ ತೆರಿಗೆ ಹಣ ಲೂಟಿ ಮಾಡುತ್ತಿರುವ ಭ್ರಷ್ಟ ಕಾಂಗ್ರೆಸ್‌-ಜೆಡಿಎಸ್‌ ಸರಕಾರದ ಕುಮಾರಸ್ವಾಮಿ ಆ್ಯಂಡ್‌ ಟೀಮ್‌ ತೊಲಗಬೇಕೆಂದು ನಿಧರ್ರಿಸಿರುವ ಕ್ಷೇತ್ರದ ಜನತೆ ಚಿಕ್ಕನಗೌಡರಿಗೆ ಮತ ಕೊಡುತ್ತಿಲ್ಲ. ಯಡಿಯೂರಪ್ಪನಿಗೆ ಕೊಡುತ್ತಿದ್ದೀರಿ ಎಂಬುದನ್ನು ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಕುಂದಗೋಳದಲ್ಲಿ ಚುನಾವಣಾ ಪ್ರಚಾರಾರ್ಥ ನಡೆದ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಭಾಗ್ಯಲಕ್ಷ್ಮೀ ಯೋಜನೆ ಚಿವುಟಿ ಹಾಕುತ್ತಿದ್ದಾರೆ. ನನಗೆ ಅವಕಾಶ ಕೊಟ್ಟರೆ ಭಾಗ್ಯಲಕ್ಷ್ಮೀ ಪುನಃ ನಿಮಗೆ ತಲುಪಿಸುವ ಕೆಲಸ ಮಾಡುತ್ತೇನೆ. ಈ ಸರಕಾರ ನಿಲ್ಲಿಸಿರುವ ಮಹತ್ವದ ಯೋಜನೆಗಳಿಗೆ ಚಾಲನೆ ಕೊಡಿಸುತ್ತೇನೆ ಎಂದರು.

ಮುಂಬರುವ ಅಧಿವೇಶನದಲ್ಲಿ ಕುಮಾರಸ್ವಾಮಿ ಕಿವಿ ಹಿಡಿದು, ಸಾಲ ಮನ್ನಾ ಮಾಡು ಇಲ್ಲವೇ ತೊಲಗು ಎಂದು ಹೇಳುತ್ತೇನೆ. ಮಹಿಳೆಯರಿಗೆ ಯಾವ ಮಾಸಾಶನ ಬರುತ್ತಿಲ್ಲ. ಇದನ್ನು ತಲುಪಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಸರಕಾರದ ಖಜಾನೆ ತುಂಬಿದೆ. ಆದರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬರುತ್ತಿಲ್ಲ. ಕುಮಾರಸ್ವಾಮಿ ಆ್ಯಂಡ್‌ ಟೀಮ್‌ ಲೂಟಿ ಮಾಡುವಲ್ಲಿ ನಿರತವಾಗಿದೆ ಎಂದು ಹರಿಹಾಯ್ದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಈ ಭಾಗದಲ್ಲಿ ಬರ ಹೆಚ್ಚಾಗಿದ್ದು, ರಾಜ್ಯ ಸರಕಾರ ನಿರ್ಲಕ್ಷಿಸುತ್ತಿದೆ. ಜನರು ಗುಳೆ ಹೋಗುತ್ತಿದ್ದಾರೆ. ಬಡವರ ಮನೆಯಲ್ಲಿ ಹೆಣ್ಣು ಹುಟ್ಟಿದರೆ ಭಾರ ಆಗಬಾರದು ಎನ್ನುವ ಕಾರಣಕ್ಕೆ ಯಡಿಯೂರಪ್ಪ ಭಾಗ್ಯಲಕ್ಷ್ಮೀ ಬಾಂಡ್‌ ಸೇರಿದಂತೆ ಹಲವು ಯೋಜನೆಗಳನ್ನು ಬಡವರ, ದಲಿತರು, ಸಾಮಾನ್ಯ ಜನರಿಗೆ ನೀಡಿದ್ದಾರೆ. ಸಿದ್ದರಾಮಯ್ಯ ಐದು ವರ್ಷ ಆಡಳಿತ ಮಾಡಿದರೂ ಒಂದೂ ಜನಪರ ಯೋಜನೆ ಬಡವರಿಗೆ ನೀಡಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಮಾತನಾಡಿ, ಪಕ್ಷದ ಎಲ್ಲ ನಾಯಕರು ಸೇರಿ ನನಗೆ ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು. ಕ್ಷೇತ್ರದಲ್ಲಿ ನಾನು ಶಾಸಕನಾಗಬೇಕು. ಹೀಗಾಗಿ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

Advertisement

ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ಮೈತ್ರಿ ಸರಕಾರದಲ್ಲಿ ಮಹಿಳೆಯರಿಗೆ ಯಾವ ಸೌಲಭ್ಯಗಳು ದೊರೆಯುತ್ತಿಲ್ಲ. ಜನರಿಗೆ ಕಣ್ಣೀರು ಹಾಕುವ ಸಿಎಂ ಬೇಡ. ಬಡವರ ಕಣ್ಣೀರು ಒರೆಸುವ ಸಿಎಂ ಬೇಕು. ಆ ನಿಟ್ಟಿನಲ್ಲಿ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು ಎಂದರು.

ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್‌ ನಾಯಕರು ಹೋಟೆಲ್ನಲ್ಲಿ ಕುಳಿತು ಹಣ ಹಂಚುವುದು ಬಿಟ್ಟು ಮತ್ತೇನು ಮಾಡುತ್ತಿಲ್ಲ. ಮೈತ್ರಿ ಅಭ್ಯರ್ಥಿ ಸೋಲು ಖಚಿತ. ಬೆಂಗಳೂರಿನ ಹಣದಿಂದ ಇಲ್ಲಿನ ಜನರನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದರು. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರುತಿ, ಸಿ.ಸಿ. ಪಾಟೀಲ, ಸಿ.ಟಿ. ರವಿ, ಅರವಿಂದ ಬೆಲ್ಲದ, ಲಕ್ಷ್ಮಣ ಸವದಿ, ಮೋಹನ ಲಿಂಬಿಕಾಯಿ, ಸೀಮಾ ಮಸೂತಿ, ಶಂಕರಣ್ಣ ಮುನವಳ್ಳಿ, ಅಶೋಕ ಕಾಟವೆ, ಚೈತ್ರಾ ಶಿರೂರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next