ಲಾರ್ಡ್ಸ್: ವಿಶ್ವಕಪ್ ನಂತಹ ಮಹತ್ವದ ಕೂಟಗಳಲ್ಲಿ ತೀರ್ಪುಗಾರಿಕೆ ಕೂಡಾ ಅಷ್ಟೇ ಮಹತ್ವ ಪಡೆದಿರುತ್ತದೆ. ಐಸಿಸಿ ಕೂಡಾ ತನ್ನ ಎಲೈಟ್ ದರ್ಜೆಯ ಅಂಪೈರ್ ಗಳನ್ನೇ ನೇಮಿಸಿರುತ್ತದೆ. ಆದರೆ ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಮಾತ್ರ ತನ್ನ ಕಳಪೆ ಅಂಪೈರಿಂಗ್ ನಿಂದಲೇ ಸುದ್ದಿಯಾಗುತ್ತಿದೆ.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯ ಕೂಡಾ ಕಳಪೆ ಅಂಪೈರಿಂಗ್ ಗೆ ಸಾಕ್ಷಿಯಾಗಿದೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ ಧರ್ಮಸೇನಾ ಮತ್ತು ದಕ್ಷಿಣ ಆಫ್ರಿಕಾದ ಮಾರಿಸ್ ಎರಾಸ್ಮಸ್ ಫೀಲ್ಡ್ ಅಂಪೈರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಿವೀಸ್ ಇನ್ನಿಂಗ್ಸ್ ನ 2.3 ನೇ ಓವರ್ ನಲ್ಲಿ ಹೆನ್ರಿ ನಿಕೋಲ್ಸ್ ಬ್ಯಾಟಿಂಗ್ ಮಾಡುತ್ತಿದ್ದರು. ವೋಕ್ಸ್ ಎಸೆದ ಚೆಂಡು ನಿಕೋಲ್ಸ್ ಪ್ಯಾಡಿಗೆ ಬಡಿದು ಆಂಗ್ಲ ಆಟಗಾರರು ಎಲ್ ಬಿಡಬ್ಲೂ ವಿಕೆಟ್ ಗೆ ಮನವಿ ಮಾಡಿದರು. ಅಂಪೈರ್ ಧರ್ಮಸೇನಾ ಔಟ್ ನೀಡಿಯೂ ಆಯಿತು. ಆದರೆ ಇದನ್ನೊಪ್ಪದ ಕಿವೀಸ್ ಆಟಗಾರ ಡಿಆರ್ ಎಸ್ ಮನವಿ ಮಾಡಿದರು. ಆದರೆ ಅಲ್ಲಿ ನೋಡಿದಾಗ ಬಾಲ್ ವಿಕೆಟ್ ಅಂತರದಿಂದ ತುಂಬಾನೇ ಎತ್ತರದಲ್ಲಿತ್ತು.
ಕಿವೀಸ್ ನಾಯಕ ವಿಲಿಯಮ್ಸನ್ ಬ್ಯಾಟಿಂಗ್ ನಡೆಸುತ್ತಿದ್ದಾಗಲೂ ಧರ್ಮಸೇನಾ ಇದೇ ರೀತಿಯ ತಪ್ಪು ಮಾಡಿದರು. ಲಿಯಾಮ್ ಪ್ಲಂಕೆಟ್ ಎಸೆತದಲ್ಲಿ ವಿಲಿಯಮ್ಸನ್ ಕೀಪರ್ ಬಟ್ಲರ್ ಗೆ ಕ್ಯಾಚ್ ನೀಡಿದರು. ಇಂಗ್ಲೆಂಡ್ ಆಟಗಾರರ ಬಲಾವದ ಮನವಿಗೆ ಧರ್ಮಸೇನಾ ಯಾವುದೇ ಪುರಸ್ಕಾರ ನೀಡಲಿಲ್ಲ. ಈ ಬಾರಿ ಇಂಗ್ಲೆಂಡ್ ರಿವ್ಯೂ ಸಲ್ಲಿಸಿತು. ಬಾಲ್ ವಿಲಿಯಮ್ಸನ್ ಬ್ಯಾಟ್ ಗೆ ಸವರಿ ಹೋಗಿದ್ದು ಸರಿಯಾಗಿ ಕಾಣುತ್ತಿತ್ತು. ಧರ್ಮಸೇನಾ ಮತ್ತೆ ತಮ್ಮ ನಿರ್ಧಾರವನ್ನು ಬದಲಿಸಬೇಕಾಯಿತು.
ಆಸೀಸ್ ವಿರುದ್ದದ ಸೆಮಿ ಪಂದ್ಯದಲ್ಲೂ ಧರ್ಮಸೇನಾ ಕೆಟ್ಟ ತೀರ್ಪಿನಿಂದಾಗಿ ಇಂಗ್ಲೆಂಡ್ ನ ಜೇಸನ್ ರಾಯ್ ಔಟ್ ಆಗಿದ್ದರು. ಒಟ್ಟಿನಲ್ಲಿ ಮಹತ್ವದ ಕೂಟಗಳಲ್ಲಿ ಐಸಿಸಿ ತನ್ನ ಅಂಪೈರ್ ಗಳ ಗುಣಮಟ್ಟವನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.