ಹೊಸಪೇಟೆ: ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಹಾಯಕರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹಮ್ಮದ್ ಅವರು, ಜಿಲ್ಲಾ ಅದಾಲತ್ ನಡೆಸಿ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳಿಗೆ ಸೂಚನೆ ನೀಡಿ, ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ. ಈ ಕುರಿತು ಸಿದ್ದರಾಮಯ್ಯನವರು ಎಲ್ಲವನ್ನು ರದ್ಧು ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ 2013ರಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಕಾನೂನಿಗೆ ಅತ್ಯಂತ ಕೆಟ್ಟ ತಿದ್ದುಪಡಿ ತಂದಿದೆ. ವಕ್ಫ್ ಟ್ರಿಬ್ಯೂನಲ್ ರಚನೆ ಮಾಡಿದೆ. ರಾಜ್ಯದಲ್ಲಿ 65 ಸಾವಿರ ಆಸ್ತಿಗಳು ಇದ್ದು, ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ 3 ಸಾವಿರ ವಕ್ಫ್ ಆಸ್ತಿಗಳಿವೆ. ಈ ಕುರಿತು ಜೆಪಿಸಿ ಅಧ್ಯಕ್ಷರ ಪ್ರವಾಸ ಮುಗಿದಿದೆ. ಪೂರ್ಣ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಪ್ರಧಾನಿ ಮೋದಿಯವರು ವಕ್ಫ್ ಕಾನೂನು ತಿದ್ದುಪಡಿಗೆ ಮುಂದಾಗಿದ್ದಾರೆ. ಬಸವರಾಜ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳೆ ಸೇರಿದಂತೆ ಅನೇಕ ನಾಯಕರು, ವಕ್ಫ್ ಕಾನೂನು ರದ್ದತಿಗೆ ಹೋರಾಟ ನಡೆಸುತ್ತಿದ್ದೇವೆ. ಇದಕ್ಕಾಗಿ ಪ್ರವಾಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಜಗದೀಶ್ ಕಮಟಿಗಿ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶ್ರೀನಾಥ್, ಬಿ.ಎಸ್.ಜಂಬಯ್ಯ ನಾಯಕ, ದ್ವಾರಕೇಶ್ ಇತರರು ಇದ್ದರು.