Advertisement

ಅಪಾಯಕಾರಿಯಾದ ಕೂಳೂರು ಸೇತುವೆ ಪರಿಸರ

02:58 AM Jul 07, 2020 | Sriram |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಸೇತುವೆ ಮತ್ತು ಅದರ ಪಕ್ಕದ ಪರಿಸರ ಮತ್ತೆ ವಾಹನ ಸವಾರರು/ಚಾಲಕರು, ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

Advertisement

ಇಲ್ಲಿನ ಹಳೆಯ ಸೇತುವೆಯನ್ನು (ಮಂಗಳೂರು ಕಡೆಗೆ ಬರುವ) ದಾಟಿ ಫ್ಲೈ ಓವರ್‌ಗೆ ಪ್ರವೇಶ ಪಡೆಯುವಲ್ಲಿ ಪದೇ ಪದೇ ಭಾರೀ ಹೊಂಡಗಳು ಸೃಷ್ಟಿಯಾಗುತ್ತಿವೆ. ಮಳೆಗಾಲ ಆರಂಭ ವಾಗುವ ಕೆಲವು ದಿನಗಳ ಮೊದಲು ಇಲ್ಲಿನ ಸಂಪರ್ಕ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಅನಂತರ ಅಲ್ಲಿಯೇ ಪಕ್ಕದಲ್ಲಿ ಗುಂಡಿಗಳು ಸೃಷ್ಟಿಯಾದವು.

ಮಳೆಗಾಲ ಆರಂಭವಾದ ಅನಂತರ ಇದುವರೆಗೆ ಸುಮಾರು ನಾಲ್ಕು ಬಾರಿ ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ ಮತ್ತೆ ಗುಂಡಿಗಳು ಹೆಚ್ಚುತ್ತಲೇ ಇವೆ. ಈ ಹಿಂದೆ ಸಂಚಾರ ದಟ್ಟಣೆಯಿಂದ ಕೂಡಿದ್ದ ಈ ಪರಿಸರದಲ್ಲಿ ಹೊಂಡಗಳಿಂದಾಗಿ ಸಮಸ್ಯೆಯಾಗಿದೆ.

ಅಸಮರ್ಪಕ ಕಾಮಗಾರಿ
ಸೇತುವೆಯಿಂದ ಸ್ವಲ್ಪ ಮುಂದಕ್ಕೆ ಇರುವ ಕೂಳೂರು ಫ್ಲೈ ಓವರ್‌ನ ಮೇಲೆ ಬೀಳುವ ಮಳೆನೀರು ಫ್ಲೈ ಓವರ್‌ನಲ್ಲಿ ಅಳವಡಿಸಲಾಗಿರುವ ಪೈಪ್‌ಗ್ಳ ಮೂಲಕ ಹೋಗದೆ ಫ್ಲೈ ಓವರ್‌ ಮತ್ತು ಸೇತುವೆಯ ನಡುವಿನ ಸ್ಥಳದಲ್ಲಿ ಶೇಖರಣೆಯಾಗುತ್ತಿರುವುದರಿಂದ ಇಲ್ಲಿ ಪದೇ ಪದೇ ಹೊಂಡಗಳಾಗುತ್ತಿವೆ.

ಅಲ್ಲದೆ ಚರ್ಚ್‌ ಸಮೀಪದ ರಸ್ತೆಯ ನೀರು ಕೂಡ ಇದೇ ಸ್ಥಳಕ್ಕೆ ಹರಿಯುತ್ತದೆ. ಹೆದ್ದಾರಿ ಕಾಮಗಾರಿ ನಡೆಸುವಾಗ ಮಳೆನೀರು ಹರಿಯುವ ಚರಂಡಿಯ ಸಂಪರ್ಕ ಕಾಮಗಾರಿಯನ್ನು ಸಮರ್ಪ ಕವಾಗಿ ನಡೆಸದೇ ಇರುವುದರಿಂದ ಈಗ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಹೆದ್ದಾರಿಯಲ್ಲೇ ಪ್ರವಹಿಸುವ ನೀರಿ ನಿಂದಾಗಿ ಹೊಂಡಗಳು ಸೃಷ್ಟಿಯಾಗಿರುವ ಜತೆಗೆ ಹೆದ್ದಾರಿ ಪಕ್ಕದಲ್ಲಿ ಬಸ್‌ಗಾಗಿ ಕಾಯುವವರಿಗೂ ತೊಂದರೆಯಾಗುತ್ತಿದೆ. ಇದು ವಾಹನ, ಜನ ಸಂಚಾರ ಹೆಚ್ಚಾಗಿರುವ ಸ್ಥಳ. ಅಲ್ಲದೆ ಇದೇ ಸ್ಥಳದಲ್ಲಿ ಕೂಳೂರು ಪೇಟೆ ಕಡೆಗೆ ಸಂಪರ್ಕಿಸುವ ಸರ್ವಿಸ್‌ ರಸ್ತೆ ಕೂಡ ಆರಂಭವಾಗುತ್ತದೆ. ಹಾಗಾಗಿ ಹೆಚ್ಚು ಅಪಾಯಕಾರಿ ಸ್ಥಳವಾಗಿ ಪರಿಣಮಿಸಿದೆ.

ಕತ್ತಲಿನಲ್ಲಿ ಹೊಸ ಸೇತುವೆ
ಕೂಳೂರಿನ ಹೊಸ ಸೇತುವೆ (ಮಂಗಳೂ ರಿನಿಂದ ಉಡುಪಿ ಕಡೆಗೆ ಹೋಗುವ) ರಾತ್ರಿ ವೇಳೆ ಸಂಪೂರ್ಣ ಕತ್ತಲಿನಿಂದ ಕೂಡಿದ್ದು ಅಪಾಯಕಾರಿಯಾಗಿದೆ. ಸೇತುವೆ ಮೇಲೆ ದಾರಿದೀಪಗಳನ್ನು ಅಳವಡಿಸ ಲಾಗಿದೆಯಾದರೂ ಅವುಗಳಲ್ಲಿ ಒಂದು ದೀಪ ಕೂಡ ಉರಿಯುತ್ತಿಲ್ಲ. ಸೇತುವೆಯ ಒಂದು ಬದಿಯಲ್ಲಿ ಪಾದಚಾರಿಗಳು ಸಂಚರಿಸಲು ಸಣ್ಣ ಪುಟ್‌ಪಾತ್‌ ಇದೆ. ಇದರ ಮೂಲಕ ಪಕ್ಕದ ಕಾರ್ಖಾನೆ ಹಾಗೂ ಇತರ ಸಾರ್ವಜನಿಕರು ನಡೆದುಕೊಂಡು ಹೋಗುತ್ತಾರೆ. ಆದರೆ ಇದು ಕತ್ತಲಿನಿಂದ ಕೂಡಿದೆ. ಅಲ್ಲದೆ ಗಿಡಗಂಟಿಗಳಿಂದ ಆವೃತವಾಗಿದ್ದು ಅಪಾಯಕಾರಿಯಾಗಿದೆ.

ನಿರಂತರ ಕಾಮಗಾರಿ
ಹೆದ್ದಾರಿಯ ಇತರ ನಿರ್ವಹಣೆ ಕೆಲಸಗಳಂತೆ ಕೂಳೂರಿನ ಗುಂಡಿ ಮುಚ್ಚುವ ಕೆಲಸ ಕೂಡ ನಡೆಸಲಾಗಿದೆ. ಆದರೆ ಮಳೆ ಹೆಚ್ಚಿರುವುದರಿಂದ ಮತ್ತೆ ಗುಂಡಿಗಳು ಬಿದ್ದಿವೆ. ಇದನ್ನು ಸರಿಪಡಿಸಲಾಗುವುದು. ಷಟ್ಪಥವಿರುವ ಹೊಸ ಸೇತುವೆ ನಿರ್ಮಾಣದ ಪ್ರಸ್ತಾವನೆ ಇರುವುದರಿಂದ ಸದ್ಯ ಈ ಹಳೆಯ ಸೇತುವೆಯನ್ನು ನಿಯಮಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ.
 - ಶಿಶುಮೋಹನ್‌, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ 66

 

Advertisement

Udayavani is now on Telegram. Click here to join our channel and stay updated with the latest news.

Next