Advertisement

ರೈಲು ನಿಲ್ದಾಣಕ್ಕೆ ಮತ್ತೆ ಮಣ್ಣಿನ ಕುಡಿಕೆ

12:50 AM Jan 21, 2019 | |

ಹೊಸದಿಲ್ಲಿ: ಉತ್ತರಪ್ರದೇಶದ ವಾರಾಣಸಿ ಹಾಗೂ ರಾಯ್‌ಬರೇಲಿಯ ರೈಲು ನಿಲ್ದಾಣಗಳಲ್ಲಿ ಟೆರ್ರಾಕೋಟದಿಂದ (ಜೇಡಿ ಮಣ್ಣಿನ ಒಂದು ವಿಧ) ತಯಾರಾದ ಮಣ್ಣಿನ ಕುಡಿಕೆಗಳು, ಮಣ್ಣಿನ ಪಾತ್ರೆ ಹಾಗೂ ತಟ್ಟೆಗಳಲ್ಲಿ ಪ್ರಯಾಣಿಕರಿಗೆ ಚಹಾ, ಕಾಫಿ ಮತ್ತು ಇನ್ನಿತರ ಲಘು ಆಹಾರ ಸರಬರಾಜು ಮಾಡುವಂತೆ ರೈಲ್ವೇ ಸಚಿವ ಪಿಯೂಷ್‌ ಗೋಯೆಲ್‌ ಈಶಾನ್ಯ ರೈಲ್ವೇ ವಿಭಾಗಕ್ಕೆ ಆದೇಶಿಸಿದ್ದಾರೆ.

Advertisement

ಇದರಿಂದಾಗಿ 15 ವರ್ಷಗಳ ಹಿಂದೆ ಅಂದಿನ ರೈಲ್ವೇ ಸಚಿವ ಲಾಲು ಪ್ರಸಾದ್‌ ಯಾದವ್‌ ಅವರ ಒತ್ತಾಸೆಯ ಮೇರೆಗೆ ರೈಲು ನಿಲ್ದಾಣಗಳಲ್ಲಿ ಬಳಕೆಗೆ ಬಂದಿದ್ದ ಮಣ್ಣಿನ ಕುಡಿಕೆಗಳು ಸದ್ಯದಲ್ಲೇ ಪುನಃ ರೈಲು ನಿಲ್ದಾಣಗಳಲ್ಲಿ ಪ್ರತ್ಯಕ್ಷವಾಗಲಿವೆ. ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೇ ಇಲಾಖೆ ಅಧಿಕಾರಿಗಳು, ಹೊಸ ಆದೇಶದಿಂದ ಪ್ಲಾಸ್ಟಿಕ್‌ ಕಪ್‌ಗ್ಳಿಗೆ ವಿದಾಯ ಹೇಳುವುದು ಮಾತ್ರ ವಲ್ಲದೆ ಸ್ಥಳೀಯ ಕುಂಬಾರರಿಗೆ ಉದ್ಯೋಗ ಕಲ್ಪಿಸಿದಂತೆಯೂ ಆಗಲಿದೆ ಎಂದಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ), ಗೋಯೆಲ್‌ ಅವರಿಗೆ ಪತ್ರ ಬರೆದು ವಾರಾಣಸಿ ಮತ್ತು ರಾಯ್‌ ಬರೇಲಿಯ ರೈಲು ನಿಲ್ದಾಣಗಳಲ್ಲಿ ಮಣ್ಣಿನ ಸಲಕರಣೆಗಳ ಉಪಯೋಗಕ್ಕೆ ಅನುವು ಮಾಡಿಕೊಟ್ಟರೆ ಈ ಭಾಗದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಮನವಿ ಮಾಡಿತ್ತು.

ಹಿಂದೆ ಬಳಕೆಗೆ ಬಂದಿದ್ದ ಮಣ್ಣಿನ ಪಾತ್ರೆಗಳಿಗಿಂತ ಈಗಿನ ಪಾತ್ರೆಗಳು ಉತ್ತಮ ದರ್ಜೆಯದಾಗಿರಲಿದ್ದು, ಗ್ರಾಹಕರ ಮನ ಗೆಲ್ಲಲಿವೆ. ಈಗಾಗಲೇ ಸುಧಾರಿತ ಪಾತ್ರೆ ತಯಾರಿಸಲು ತರಬೇತಿ ನೀಡಲಾಗಿದೆ. ಕುಂಬಾರರಿಗೆ ವಿದ್ಯುತ್‌ ಚಾಲಿತ ಗಾಲಿಗಳನ್ನು ನೀಡಲಾಗಿದೆ. ಇದರಿಂದ ದಿನವೊಂದಕ್ಕೆ 100 ಕಪ್‌ ತಯಾರಿಸುವವರು 600 ಕಪ್‌ ತಯಾರಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next