ಕುಳಗೇರಿ ಕ್ರಾಸ್: ಮಲಪ್ರಭಾ ನವಿಲುತೀರ್ಥ ಜಲಾಶಯದಿಂದ 5594 ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಜಿಲ್ಲೆಯ ಗಡಿ ಭಾಗದಲ್ಲಿರುವ ಮಲಪ್ರಭಾ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ಸೋಮವಾರ ಬೆಳಿಗ್ಗೆ ಗೋವನಕೊಪ್ಪ ಹಳೆ ಸೇತುವೆ, ಕಿತ್ತಲಿ ಬ್ಯಾರೇಜ್ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಧಿಕಾರಿ ಕೆ.ಎಂ. ಜಾನಕಿ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು.
ನಂತರ ರೆೈತರ ಜಮಿನುಗಳಿಗೆ ನೀರು ನುಗ್ಗಿದರ ಬಗ್ಗೆ ಜಲಾವೃತಗೊಂಡ ಬೆಳೆಗಳ ಕುರಿತು ವಿಚಾರಿಸಿದರು. ನದಿಯ ಪಕ್ಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಳುಗಡೆಯಾದ ಗ್ರಾಮಗಳಲ್ಲಿ ವಾಸವಿರುವ ಸಂತ್ರಸ್ತರ ಮನೆಗಳ ಸ್ಥಿತಿ-ಗತಿ ಬಗ್ಗೆ ತಹಶೀಲ್ದಾರ್ ಜೆ.ಬಿ. ಮಜ್ಜಗಿ ಅವರಿಂದ ಮಾಹಿತಿ ಪಡೆದರು. ಪ್ರವಾಹ ಹೆಚ್ಚಾದರೆ ಅನಾಹುತಗಳ ತಡೆಗೆ ಅಗತ್ಯ ಕ್ರಮ ಕೆೈಗೊಳ್ಳುವಂತೆ ತಹಶೀಲ್ದಾರ್ ಗೆ ಸೂಚಿಸಿದರು.
ನೀರಿನ ಮಟ್ಟ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಪ್ರವಾಹ ಇಳಿಕೆಯಾಗುವವರೆಗೂ ಎಚ್ಚರಿಕೆಯಿಂದಿರಿ. ನೀರಿನ ಜೊತೆ ಚೆಲ್ಲಾಟವಾಡಬೇಡಿ, ಮಕ್ಕಳನ್ನು ನದಿಯ ಹತ್ತಿರ ಬಿಡಬೇಡಿ ಎಂದು ನದಿ ಪಾತ್ರದ ಗ್ರಾಮಸ್ಥರಿಗೆ ಕಳಕಳಿಯ ಮಾತು ಹೇಳಿದರು.
ಹೊಸ ಗ್ರಾಮಗಳಿಗೆ ಹೋಗಿ: ಹೊಸ ಊರುಗಳಲ್ಲಿನ ಮನೆಗಳ ಸ್ಥಿತಿ-ಗತಿ ಕುರಿತು ಮಾಹಿತಿ ಪಡೆದರು. ಅನಾಹುತಗಳಿಗೆ ದಾರಿ ಮಾಡಿಕೊಡಬೇಡಿ, ಹೊಸ ಮನೆ ಕೊಟ್ಟಿದ್ದರೆ ದಯವಿಟ್ಟು ಅದರಲ್ಲೇ ವಾಸವಾಗಿ ಎಂದು ನದಿ ಪಾತ್ರದ ಗ್ರಾಮಸ್ಥರಿಗೆ ವಿನಂತಿಸಿದರು.ಬಾದಾಮಿ ತಹಶೀಲ್ದಾರ್ ಜೆ.ಬಿ.ಮಜ್ಜಗಿ, ಕಂದಾಯ ನಿರೀಕ್ಷಕ ವಿ.ಎ. ವಿಶ್ವಕರ್ಮ ಸೇರಿದಂತೆ ಅಧಿಕಾರಿಗಳು ಇದ್ದರು.