ಧರ್ಮಶಾಲಾ: ಭಾರತ ಪ್ರವಾಸದ ಕೊನೆಯ ಟೆಸ್ಟ್ ಆಡಲಿಳಿದ ಇಂಗ್ಲೆಂಡ್ ತಂಡಕ್ಕೆ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಕುಲದೀಪ್ ಯಾದವ್ ಕಾಡಿದ್ದಾರೆ. ಉಭಯ ಸ್ಪಿನ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 218 ರನ್ ಗಳಿಗೆ ಆಲೌಟಾಗಿದೆ.
ಧರ್ಮಶಾಲಾದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರು ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್ ಗೆ ಡಕೆಟ್ ಮತ್ತು ಕ್ರಾಲಿ 64 ರನ್ ಜತೆಯಾಟವಾಡಿದರು. ಆದರೆ 27 ರನ್ ಗಳಿಸಿದ ಡಕೆಟ್ ಕುಲದೀಪ್ ಗೆ ವಿಕೆಟ್ ಒಪ್ಪಿಸಿದರು. ರೂಟ್, ಪೋಪ್ ಆರಂಭ ಪಡೆದರೂ ದೊಡ್ಡ ರನ್ ಗಳಿಸಲು ಶಕ್ತರಾಗಲಿಲ್ಲ.
ಆದರೆ ಉತ್ತಮ ಫಾರ್ಮ್ ಮುಂದುವರಿಸಿದ ಜ್ಯಾಕ್ ಕ್ರಾಲಿ 79 ರನ್ ಗಳಿಸಿದರು. 11 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದ ಕ್ರಾಲಿ ಅವರು ಕುಲದೀಪ್ ಎಸೆತಕ್ಕೆ ಬೌಲ್ಡ್ ಆದರು. ಕೊನೆಯಲ್ಲಿ ಫೋಕ್ಸ್ 24 ರನ್ ಗಳಿಸಿದರು.
ಭಾರತದ ಪರ ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಮಾಡಿದರು. ಆರಂಭದ ನಾಲ್ಕು ಸೇರಿ ಒಟ್ಟು ಐದು ವಿಕೆಟ್ ಪಡೆದರು. ಇದೇ ವೇಳೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 50 ವಿಕೆಟ್ ಕಿತ್ತ ಸಾಧನೆ ಮಾಡಿದರು. ನೂರನೇ ಪಂದ್ಯವಾಡುತ್ತಿರುವ ರವಿ ಅಶ್ವಿನ್ ನಾಲ್ಕು ವಿಕೆಟ್ ಪಡೆದರು. ರವೀಂದ್ರ ಜಡೇಜಾ ಅವರು ಒಂದು ವಿಕೆಟ್ ಪಡೆದರು. ಎಲ್ಲಾ ಹತ್ತು ವಿಕೆಟ್ ಗಳು ಸ್ಪಿನ್ನರ್ ಗಳ ಪಾಲಾಯಿತು.
ಪಡಿಕ್ಕಲ್ ಪದಾರ್ಪಣೆ: ಕನ್ನಡಿಗ ದೇವದತ್ತ ಪಡಿಕ್ಕಲ್ ಅವರು ಇಂದು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ರಜತ್ ಪಾಟಿದಾರ್ ಅವರು ಗಾಯಗೊಂಡ ಕಾರಣ ಪಡಿಕ್ಕಲ್ ಗೆ ಅವಕಾಶ ದೊರೆಯಿತು. ಅಶ್ವಿನ್ ಅವರು ಪಡಿಕ್ಕಲ್ ಗೆ ಕ್ಯಾಪ್ ನೀಡಿದರು.