Advertisement

ಪಾಕ್‌ಗೆ ಮುಖಭಂಗ

12:44 AM Jul 18, 2019 | Team Udayavani |

ದ ಹೇಗ್‌(ಹಾಲೆಂಡ್‌): ಪಾಕಿಸ್ಥಾನದಲ್ಲಿ ಬಂದಿಯಾಗಿರುವ ಭಾರತದ ನಿವೃತ್ತ ನೌಕಾ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದಲ್ಲಿ ಭಾರತದ ವಾದಕ್ಕೆ ಐತಿಹಾಸಿಕ ಜಯ ಸಿಕ್ಕಿದೆ.

Advertisement

ಬುಧವಾರ ಹೊರಬಿದ್ದ ಪ್ರಕರಣದ ಅಂತಿಮ ತೀರ್ಪಿನಲ್ಲಿ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ಥಾನದ ಸೇನಾ ನ್ಯಾಯಾಲಯ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಪುನರ್‌ಪರಿಶೀಲಿಸಬೇಕು ಹಾಗೂ ಜಾಧವ್‌ ಅವರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಎಲ್ಲ ರಾಜತಾಂತ್ರಿಕ ನೆರವುಗಳೂ ದೊರೆಯುವಂತಾಗಬೇಕು ಎಂದು ಐಸಿಜೆ ಮುಖ್ಯ ನ್ಯಾಯಮೂರ್ತಿ ಅಬ್ದುಲ್‌ಖಾವಿ ಅಹ್ಮದ್‌ ಯೂಸುಫ್ ನಿರ್ದೇಶಿಸಿದ್ದಾರೆ.

ಭಯೋತ್ಪಾದನೆ ಹಾಗೂ ಗೂಢಚರ್ಯೆ ಆರೋಪ ದಡಿ 2016ರ ಮಾ. 3ರಂದು ಪಾಕಿಸ್ಥಾನದ ಭದ್ರತಾ ಪಡೆಗಳು ಜಾಧವ್‌ ಅವರನ್ನು ಬಂಧಿಸಿದ್ದವು. ಅನಂತರ ವಿಚಾರಣೆ ನಡೆದು ಪಾಕಿಸ್ಥಾನ ಸೇನಾ ನ್ಯಾಯಾಲಯವು 2017ರ ಎಪ್ರಿಲ್‌ನಲ್ಲಿ ಜಾಧವ್‌ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಭಾರತ ಸರಕಾರ 2017ರ ಮೇ 18ರಂದು ಐಸಿಜೆ ಮೊರೆ ಹೋಗಿತ್ತು. ಇದೇ ವರ್ಷ ಫೆಬ್ರವರಿ 21ರಂದು ತೀರ್ಪಿನ ವಿಚಾರಣೆಯನ್ನು ಕಾಯ್ದಿರಿಸಿರುವುದಾಗಿ ನ್ಯಾಯಪೀಠ ಘೋಷಿಸಿತ್ತು. ಅದಾಗಿ ಐದು ತಿಂಗಳಲ್ಲಿ ಈಗ ಅಂತಿಮ ತೀರ್ಪು ಹೊರಬಿದ್ದಿದೆ.

ವಿಯೆನ್ನಾ ಒಪ್ಪಂದದ ಉಲ್ಲಂಘನೆ
ವಿಯೆನ್ನಾ ಒಪ್ಪಂದದ ಪ್ರಕಾರ, ಜಾಧವ್‌ ಅವರನ್ನು ಬಂಧಿಸಿದ ಕೂಡಲೇ ಭಾರತಕ್ಕೆ ಆ ಬಗ್ಗೆ ಪಾಕಿಸ್ಥಾನ ಮಾಹಿತಿ ನೀಡಬೇಕಿತ್ತು. ಆದರೆ ಮೂರು ವಾರಗಳ ಬಳಿಕ ಭಾರತಕ್ಕೆ ತಿಳಿಸಲಾಗಿದೆ. ಇದೂ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದ ಅವರು, ಜಾಧವ್‌ ಅವರ ಭೇಟಿಗಾಗಿ ಭಾರತ ಮನವಿ ಸಲ್ಲಿಸಿದರೂ ಅವನ್ನು ಪಾಕ್‌ ಪುರಸ್ಕರಿಸಿಲ್ಲ. ಇದಕ್ಕೆ ಕಾರಣಗಳನ್ನು ನೀಡುವಲ್ಲಿಯೂ ಪಾಕಿಸ್ಥಾನ ವಿಫ‌ಲವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಾಧವ್‌ ಪ್ರಕರಣದಲ್ಲಿ ಭಾರತಕ್ಕೆ ಆದ ಲಾಭ ನಷ್ಟಗಳು
ಲಾಭಗಳು
-ಪಾಕ್‌ ಕೋರ್ಟ್‌ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದತಿ
-ಜಾಧವ್‌ ವಿಚಾರಣೆಯ ಒಟ್ಟು ಪ್ರಕ್ರಿಯೆನ್ನು ಪಾಕಿ ಸ್ಥಾನ ಮರುಪರಿಶೀಲನೆ ನಡೆಸಬೇಕು
-ವಿಯೆನ್ನಾ ಒಪ್ಪಂದದ ಅನುಚ್ಛೇದ 36 ಅನ್ನು ಪಾಕಿಸ್ಥಾನ ಉಲ್ಲಂ ಸಿದೆ
-ಜಾಧವ್‌ಗೆ ರಾಜತಾಂತ್ರಿಕ ನೆರವು ಒದಗಿಸಬೇಕು

Advertisement

ನಷ್ಟಗಳು
-ಸೇನಾ ನ್ಯಾಯಾ ಲಯ ವಿಧಿಸಿದ ಗಲ್ಲು ಶಿಕ್ಷೆ ಯನ್ನು ರದ್ದು ಗೊಳಿ ಸುವುದಕ್ಕೆ ಐಸಿಜೆ ನಿರಾ ಕರಣೆ
-ಜಾಧವ್‌ ಬಿಡುಗಡೆ ಮಾಡುವಂತೆ ಸೂಚಿಸಲೂ ಐಸಿಜೆ ಅಸಮ್ಮತಿ

ಏನಿದು ವಿಯೆನ್ನಾ ಒಪ್ಪಂದ?
ತೃತೀಯ ವಿಶ್ವದ ಸ್ವತಂತ್ರ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ನಡೆಗಳ ಬಗ್ಗೆ ನಿರ್ದಿಷ್ಟ ರೂಪುರೇಷೆಗಳನ್ನು ಚರ್ಚಿಸಿ, ಲಿಖೀತ ರೂಪದ ಮಾರ್ಗಸೂಚಿಗಳನ್ನು ರೂಪಿಸಲು 1961ರಲ್ಲಿ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ನಡೆಸಲಾಗಿತ್ತು. ಒಂದು ದೇಶದ ರಾಜತಂತ್ರಜ್ಞರು, ಮತ್ತೂಂದು ದೇಶದಲ್ಲಿ (ಅದು ಶತ್ರು ರಾಷ್ಟ್ರವಾಗಿದ್ದರೂ ಸರಿ) ನಿರ್ಭೀತಿಯಿಂದ ರಾಜತಾಂತ್ರಿಕ ಕಾರ್ಯಭಾರಗಳನ್ನು ನಿರ್ವಹಿಸಲು ಅನುಕೂಲವಾಗುವಂಥ ವಾತಾವರಣ ನಿರ್ಮಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿತ್ತು. ಸಮ್ಮೇಳನದಲ್ಲಿ ನಡೆದ ಚರ್ಚೆಗಳ ಆಧಾರದಲ್ಲಿ ರೂಪಿಸ ಲಾದ ಕರಡು 1969ರಲ್ಲಿ ಅಂತಿಮ ಸ್ವರೂಪ ತಾಳಿತು. ಅದೇ ವರ್ಷ ಮೇ 23ರಂದು ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಯಿತು. ಈ ಮಾರ್ಗಸೂಚಿಗಳಿಗೆ ವಿಯೆನ್ನಾ ಒಪ್ಪಂದಗಳು ಎಂದು ಹೆಸರಿಡಲಾಗಿದ್ದು, ಎಲ್ಲ ರಾಷ್ಟ್ರಗಳಿಗೆ 1969ರ ಮೇ 23ರಿಂದಲೇ ಸಹಿ ಹಾಕಲು ಮುಕ್ತ ಅವಕಾಶ ನೀಡಲಾಯಿತು. 2018ರ ಜನವರಿಯವರೆಗೆ ಭಾರತ, ಪಾಕಿಸ್ಥಾನ ಸೇರಿದಂತೆ 116 ದೇಶಗಳು ಆ ಒಪ್ಪಂದಕ್ಕೆ ಸಹಿ ಹಾಕಿವೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯವಾಗಿದೆ. ವಾಸ್ತವಾಂಶ ಗಳನ್ನು ವಿಸ್ತೃತವಾಗಿ
ಅಧ್ಯಯನ ನಡೆಸಿ ತೀರ್ಪು ನೀಡಿದ್ದಕ್ಕೆ ಐಸಿಜೆಗೆ ಅಭಿನಂದನೆಗಳು. ಕುಲಭೂಷಣ್‌ ಜಾಧವ್‌ಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ನಮ್ಮ ಸರಕಾರ ಎಂದಿಗೂ ಶ್ರಮಿಸುತ್ತದೆ.
– ನರೇಂದ್ರ ಮೋದಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next