ಬೆಂಗಳೂರು: ಚಿಂತಕ ಪ್ರೊ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಕಾರ್ಯಾಚರಣೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಶುಕ್ರವಾರ ಬೆಳಗಾವಿ ಮೂಲದ ವ್ಯಕ್ತಿಯನ್ನು ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಮೊದಲನೇ ಆರೋಪಿಯ ಬಂಧನವಾದಂತಾಗಿದೆ.
ಬೆಳಗಾವಿಯ ಪ್ರವೀಣ್ ಪ್ರಕಾಶ್ ಚತುರ್ (27) ಬಂಧಿತ. ಆರೋಪಿಯನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಧಾರವಾಡದ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಜೂನ್ 7ರವರೆಗೆ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
2015ರ ಅ.30 ರಂದು ಪ್ರೊ ಎಂ.ಎಂ.ಕಲ್ಬುರ್ಗಿಯನ್ನು ಅವರ ಮನೆ ಬಾಗಿಲ ಬಳಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಹತ್ಯೆಗೈದು ಬೈಕ್‌ನಲ್ಲಿ ಪರಾರಿಯಾಗಿದ್ದರು. ನಂತರ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಹಾಗೂ ಸಿಐಡಿಗೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಈ ಮಧ್ಯೆ, 2017ರ ಸೆ.5ರಂದು ನಡೆದ ಗೌರಿ ಲಂಕೇಶ್ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಎಸ್‌ಐಟಿ ತಂಡಕ್ಕೆ ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ್ದ ತಂಡ, ಕಲ್ಬುರ್ಗಿ ಅವರ ಸೈದ್ಧಾಂತಿಕ ನಿಲುವು ಹಾಗೂ ವೈಯಕ್ತಿಕ ವಿಚಾರ ಆಧರಿಸಿ ತನಿಖೆ ನಡೆಸಿತ್ತು.
ಈ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೈಕ್ ಚಾಲಕ ಗಣೇಶ್ ಮಿಸ್ಕಿನ್, ಶೂಟರ್ ಪರಶುರಾಮ್ ವಾಘ್ಮೋರೆ, ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಹಾಗೂ ವಾಸುದೇವ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.