ಮಂಗಳೂರು/ಉಡುಪಿ: ಕೂಳೂರು ಫಲ್ಗುಣಿ ನದಿಗೆ ಷಟ³ಥ ಸೇತುವೆ, ಘಾಟಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ, ಕುಂದಾಪುರದಿಂದ ಹೊನ್ನಾವರವರೆಗಿನ 2,639 ಕೋ.ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಸೇರಿದಂತೆ ರಾಜ್ಯದ
ಹಲವು ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಗುರುಪುರ ನೂತನ ಸೇತುವೆ ಸಹಿತ ಪೂರ್ಣ ಗೊಂಡಿರುವ 8 ಕಾಮಗಾರಿಗಳ ಲೋಕಾರ್ಪಣೆಯನ್ನು ಶನಿವಾರ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವರ್ಚುವಲ್ ವ್ಯವಸ್ಥೆಯಡಿ ನೆರವೇರಿಸಿದರು.
ಮಂಗಳೂರು – ಬೆಂಗಳೂರು ಮಧ್ಯೆ ಸುಗಮ ಸಂಚಾರಕ್ಕಾಗಿ ಶಿರಾಡಿ ಯಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ದ.ಕ. ಜಿಲ್ಲೆಯಲ್ಲಿ ರಾ.ಹೆ.ಗೆ ಸಂಬಂಧಪಟ್ಟಂತೆ 214.22 ಕೋ.ರೂ. ವೆಚ್ಚದ ಯೋಜನೆಗಳಿಗೆ ಸಚಿವ ಗಡ್ಕರಿ ಶಿಲಾನ್ಯಾಸ ನೆರೆವೇರಿಸಿ ದ್ದಾರೆ. ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಹಾಗೂ ಕುಲಶೇಖರ-ಕಾರ್ಕಳ ಹೆದ್ದಾರಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆದು 3 ತಿಂಗಳೊಳಗೆ ಕಾಮಗಾರಿ ಆರಂಭವಾಗಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ರಾಜೇಶ್ ನಾೖಕ್ ಉಳಿಪಾಡಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಶಿಶುಮೋಹನ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಲಾನ್ಯಾಸಗೊಂಡ ಯೋಜನೆಗಳು
– ರಾ.ಹೆ. 66ರ ಕೂಳೂರಿನಲ್ಲಿ 69.02 ಕೋ.ರೂ. ವೆಚ್ಚದಲ್ಲಿ 6 ಪಥದ ಸೇತುವೆ
– 58.84 ಕೋ.ರೂ. ವೆಚ್ಚದಲ್ಲಿ ಸಂಪಾಜೆ ಘಾಟಿಯಲ್ಲಿ ತಡೆಗೋಡೆ, ಕಾಂಕ್ರೀಟ್ ಚರಂಡಿ, ರಸ್ತೆ ಸುರಕ್ಷೆ ಕಾಮಗಾರಿ.
– 36.5 ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟಿ ರಸ್ತೆಯ ಕಣಿವೆ ಭಾಗದಲ್ಲಿ 26 ಕಿ.ಮೀ. ಉದ್ದದ ಶಾಶ್ವತ ತಡೆಗೋಡೆ.
– 19.36 ಕೋ.ರೂ. ವೆಚ್ಚದಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಣಿವೆ ಭಾಗದಲ್ಲಿ 13 ಕಿ.ಮೀ. ಉದ್ದದ ಶಾಶ್ವತ ತಡೆಗೋಡೆ .
– 30.50 ಕೋ.ರೂ. ವೆಚ್ಚದಲ್ಲಿ ಬಂಟ್ವಾಳ-ಮೈಸೂರು ರಾ.ಹೆ. ಅಭಿವೃದ್ಧಿ ಕಾಮಗಾರಿ.