Advertisement

ಕುಲಕುಂದಾ ಸರ್ಕಾರಿ ಶಾಲೆ ಕಟ್ಟಡ ಕಾಮಗಾರಿ ನನೆಗುದಿಗೆ

08:41 AM Feb 12, 2019 | |

ವಾಡಿ: ಸೂಕ್ತ ತರಗತಿ ಕೋಣೆಗಳಿಲ್ಲದ ಕಾರಣ ಮಕ್ಕಳು ಮರದ ಕೆಳಗೆ ಪಾಠ ಕೇಳುತ್ತಿದ್ದಾರೆ. ಮಳೆ, ಗಾಳಿ, ಚಳಿ, ಬಿಸಿಲಿಗೆ ವಿದ್ಯಾರ್ಥಿಗಳು ನಲುಗಿ ಹೋಗುತ್ತಿದ್ದಾರೆ. ಮಕ್ಕಳ ಕಷ್ಟ ನೋಡಲಾಗದೆ ಗ್ರಾಮದ ಶಿಕ್ಷಣ ಪ್ರೇಮಿಗಳು ಕಟ್ಟಡಕ್ಕೆ ಭೂಮಿ ದೇಣಿಗೆ ಕೊಟ್ಟು, ಸರಕಾರ ಅನುದಾನ ಬಿಡುಗಡೆಯಾದರೂ ಕಾಮಗಾರಿ ಇನ್ನು ಆರಂಭವಾಗಿಲ್ಲ. ಈ ಗ್ರಾಮದ ಸರಕಾರಿ ಶಾಲೆ ಮಕ್ಕಳ ಐದು ವರ್ಷದ ಅರಣ್ಯರೋಧನ ಮುಂದುವರಿದಿದೆ.

Advertisement

ಚಿತ್ತಾಪುರ ತಾಲೂಕು ಕಡಬೂರ ಗ್ರಾಪಂ ವ್ಯಾಪ್ತಿಯ ಕುಲಕುಂದಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ಮಂಜೂರಾಗಿ ವರ್ಷ ಕಳೆದಿದೆ. ಕ್ಷೇತ್ರಶಿಕ್ಷಣಾಧಿಕಾರಿ ಶಂಕ್ರೆಮ್ಮ ಢವಳಗಿ ಅವರು ಭೂಮಿ ಪೂಜೆ ನೆರವೇರಿಸಿ ನಾಲ್ಕು ತಿಂಗಳು ಗತಿಸಿದೆ. ಕಟ್ಟಡ ನಿರ್ಮಾಣದ ಹೊಣೆ ಹೊತ್ತ ಭೂಸೇನಾ ನಿಗಮದ ಅಧಿಕಾರಿಗಳು ಶಾಲಾ ಅಂಗಳದಲ್ಲಿ ಐದಾರು ಗುಂಡಿಗಳನ್ನು ಬಗೆದು ತಳಪಾಯ ನಿರ್ಮಿಸಿ ನಾಪತ್ತೆಯಾಗಿದ್ದಾರೆ. ಅತ್ತ ತಳಪಾಯವೂ ಗುಣಮಟ್ಟದ್ದಾಗಿಲ್ಲ. ಇತ್ತ ಕಾಮಗಾರಿಯೂ ವೇಗ ಪಡೆದುಕೊಳ್ಳುತ್ತಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ಮಡಿವಾಳ ಹಾಗೂ ಗ್ರಾಮದ ಮುಖಂಡ ಪರಶುರಾಮ ಪೂಜಾರಿ ದೂರಿದ್ದಾರೆ.

ಶಿಥಿಲಗೊಂಡ ಸದ್ಯದ ಶಾಲಾ ಕಟ್ಟಡ 40 ವರ್ಷಗಳಷ್ಟು ಹಳೆಯದ್ದಾಗಿದೆ. ಗೋಡೆಗಳು ಬಿರುಕುಬಿಟ್ಟಿವೆ. ಮೇಲ್ಛಾವಣಿ ಕುಸಿದು ಬೀಳುವ ಆತಂಕ ಎದುರಾಗಿದೆ. ಪರಿಣಾಮ ಶಾಲಾ ಕಟ್ಟಡದಲ್ಲಿ ಪಾಠ ಮಾಡಲು ಸಾಧ್ಯವಾಗದೆ ಇಲ್ಲಿನ ಶಿಕ್ಷಕರು ಐದಾರು ವರ್ಷಗಳಿಂದ ಮರದ ಕೆಳಗೆ ಮಕ್ಕಳಿಗೆ ಶಿಕ್ಷಣ ಬೋಧಿಸುತ್ತಿದ್ದಾರೆ. ಮಳೆ ಬಂದರೆ ಶಾಲೆಗೆ ರಜೆ ಘೋಷಿಸುತ್ತಾರೆ. ಹೀಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಭೂಮಾಲೀಕರ ಮನವೊಲಿಸುವ ಮೂಲಕ ಶಾಲಾ ಕಟ್ಟಡಕ್ಕೆ ಭೂಮಿ ದಾನ ಪಡೆಯಲಾಗಿದೆ. ಪ್ರಿಯಾಂಕ್‌ ಖರ್ಗೆ ನೂತನ ಕಟ್ಟಡಕ್ಕೆ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ. ಆದರೆ ಭೂಸೇನಾ ನಿಗಮದ ಅಧಿಕಾರಿಗಳು ಮಾತ್ರ ಕಾಮಗಾರಿ ನನೆಗುದಿಗೆ ತಳ್ಳಿದ್ದಾರೆ. ಹೀಗಾಗಿ ಮಕ್ಕಳ ಹೊಸ ಕಟ್ಟಡದ ಕನಸು ಈಡೇರುತ್ತಿಲ್ಲ ಎಂದು ಮಾರ್ಗದರ್ಶಿ ಸಂಸ್ಥೆಯ ರಾಹುಲ ಮಾಳಗಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next