ಕುಳಗೇರಿ ಕ್ರಾಸ್: ಗ್ರಾಮದ ಬಸವ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬಡವರು ಮತ್ತು ಮಧ್ಯಮ ವರ್ಗದ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೂ ಶಾಲೆ ಆರಂಭ ಮಾಡಿದೆ. ಈ ಶಾಲೆಯಲ್ಲಿ ಓದುತ್ತಿರುವುದು 35 ವಿದ್ಯಾರ್ಥಿಗಳು ಮಾತ್ರ. ಮುಖ್ಯಶಿಕ್ಷಕಿ ಸೇರಿ 4 ಜನ ಸಿಬ್ಬಂದಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪ್ಯೂಟರ್, ಪ್ಯಾನ್ ಇದ್ದರೂ ವಿದ್ಯುತ್ ವ್ಯವಸ್ಥೆಯಿಲ್ಲ. 5 ಗುಂಟೆ ಜಾಗದಲ್ಲಿ ಒಂದೇ ಕೊಠಡಿ ನಿರ್ಮಿಸಿ 1994ರಿಂದ ಆರಂಭಗೊಂಡ ಈ ಕನ್ನಡ ಶಾಲೆ ಹಂತ-ಹಂತವಾಗಿ ಮೇಲ್ದರ್ಜೆ ಗೇರಿದ್ದು, ಈಗ 6 ಕೊಠಡಿಗಳ ನೂತನ ಕಟ್ಟಡ ಹೊಂದಿದೆ. ಆದರೆ, ಎಲ್ಲ ಕಟ್ಟಡಗಳು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದ್ದು, ಕೊಠಡಿಗಳ ಮೇಲ್ಚಾವಣಿ ಉದುರಿ ಅಸ್ತಿ ಪಂಜರದಂತಾಗಿದೆ. ಅಲ್ಲದೇ ಕೆಲ ಕಟ್ಟಡ ನೆಲಕಚ್ಚಿವೆ.
ಪೋಷಕರ ಹಿಂದೇಟು: ಈ ಸರ್ಕಾರಿ ಶಾಲೆಯ ಸುತ್ತ ಸಾಕಷ್ಟು ಖಾಸಗಿ ಶಾಲೆಗಳು ತಲೆಎತ್ತಿವೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕು ಎನ್ನುವ ಉದ್ಧೇಶ ಪಾಲಕರಲ್ಲಿದೆ. ಈ ಶಾಲೆಯಲ್ಲಿನ ದುಸ್ಥಿತಿ ಕಂಡು ಅನಾಹುತಗಳಾದರೆ ನಮ್ಮ ಮಕ್ಕಳ ಗತಿಯೇನು ಎಂದು ಭಯಭೀತರಾದ ಪೋಷಕರು ಈ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ : ಅನಂತ್ ಕುಮಾರ್ ಹೆಗಡೆ ಸೇರಿ 17 ಮಂದಿ ಸಂಸದರಿಗೆ ಕೋವಿಡ್ ಸೋಂಕು ದೃಢ
ಹೊಸ ಕಟ್ಟಡವಾದರೂ ಎಲ್ಲ ಕೊಠಡಿಗಳು ಶಿಥಿಲಾವಸ್ಥೆ ಕಂಡಿದ್ದರಿಂದ ಮಳೆ ಬಂದರೆ ಕಟ್ಟಡ ನೆಲಕಚ್ಚುವ ಆತಂಕ ಮಕ್ಕಳು ಹಾಗೂ ಪಾಲಕರಲ್ಲಿ ಕಾಡುತ್ತಿದೆ. ಪಠ್ಯಪುಸ್ತಕ, ಸಮವಸ್ತ್ರ, ಹಾಗೂ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯ ನೀಡುತ್ತಿದ್ದರೂ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿರುವುದು ದುರ್ದೈವದ ಸಂಗತಿ.
ಅಧಿಕಾರಿಗಳ ನಿರ್ಲಕ್ಷ್ಯ: ಈ ಶಾಲೆಯ ಶಿಕ್ಷಕರು ನಿರಂತರವಾಗಿ ಕಟ್ಟಡ ಬಿದ್ದ ಬಗ್ಗೆ, ಅವ್ಯವಸ್ಥೆ, ಸೌಲಭ್ಯದ ಕುರಿತು ಸಾಕಷ್ಟು ಬಾರಿ ಶಾಲೆಯ ಭಾವಚಿತ್ರ ಸಮೇತ ಅರ್ಜಿ ಬರೆದು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಶಾಲೆಯ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಪೋಷಕರ ಆರೋಪವಾಗಿದೆ.
ಹೊಸದಾಗಿ ಕಟ್ಟಿದ ಕಟ್ಟಡಗಳು ಬೀಳುವ ಹಂತ ತಲುಪಿವೆ. ಕನ್ನಡ ಶಾಲೆಯ ಸ್ಥಿತಿ ಕಂಡು ಮಕ್ಕಳ ಹೆಸರು ನೋಂದಾಯಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಲಿ. ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕ್ರಮ ಕೈಗೊಳ್ಳಬೇಕು.
– ವೆಂಕಣ್ಣ ಹೊರಕೇರಿ, ಗ್ರಾಪಂ ಉಪಾಧ್ಯಕ್ಷ ಹನಮಂತ ನರಗುಂದ, ಸದಸ್ಯ, ಬಸಪ್ಪ ಧರೆಗೌಡ್ರ, ಪಿಕೆಪಿಎಸ್ ನಿರ್ದೇಶಕ