Advertisement

ಕುಕ್ಕೆ: ಕುಮಾರ ಸಂಸ್ಕಾರ ಆಂದೋಲನ ಯಶಸ್ವಿ

10:14 AM Apr 29, 2019 | Team Udayavani |

ಸುಬ್ರಹ್ಮಣ್ಯ ಎ. 28: ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪ್ರಮುಖ ಎರಡು ಪುಣ್ಯ ನದಿಗಳ ಸಹಿತ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಯುವ ಬ್ರಿಗೇಡ್‌ ಆಂದೋಲನ ‘ಕುಮಾರ ಸಂಸ್ಕಾರ’ ರವಿವಾರ ಯಶಸ್ವಿಯಾಗಿ ಪೂರ್ಣಗೊಂಡಿತು. ಕ್ಷೇತ್ರದ ಪ್ರಮುಖ ನದಿಗಳು ಸಹಿತ ಪರಿಸರದಲ್ಲಿ ಸ್ವಚ್ಛತಾ ಆಂದೋಲನದ ವೇಳೆ ಹತ್ತಕ್ಕೂ ಅಧಿಕ ಟನ್‌ ತ್ಯಾಜ್ಯ ಸಂಗ್ರಹವಾಗಿದೆ.

Advertisement

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಯುವ ಬ್ರಿಗೇಡ್‌ ಕಾರ್ಯಕರ್ತರು ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಹಾಗೂ ದರ್ಪಣತೀರ್ಥ ನದಿಗಳನ್ನು ಹಾಗೂ ದೇಗುಲದ ಪರಿಸರವನ್ನು ಸ್ವಚ್ಛಗೊಳಿಸಿದರು. ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ನಮ್ಮ ಸುಬ್ರಹ್ಮಣ್ಯ ಯುವ ಸಂಘಟನೆಯ ಕಾರ್ಯಕರ್ತರು ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದರು.

ರವಿವಾರ ಬೆಳಗ್ಗೆ ದೇವಸ್ಥಾನದ ಸುತ್ತ ಮುತ್ತಲ ಪ್ರದೇಶ ಹಾಗೂ ರಥಬೀದಿಯಿಂದ ಕುಮಾರಧಾರಾ ತನಕ ಪ್ಲಾಸ್ಟಿಕ್‌ ಬಾಟಲಿ, ಬಟ್ಟೆ, ಗುಟ್ಕಾ ಚೀಟಿಗಳು ಇತ್ಯಾದಿ ಕಸ ಹೆಕ್ಕಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಸಾರ್ವಜನಿಕ ಸ್ಥಳ, ವಾಹನ ಪಾರ್ಕಿಂಗ್‌ ಹಾಗೂ ಮುಖ್ಯ ರಸ್ತೆಯಲ್ಲಿ ಬರುವ ಬಸ್‌ ತಂಗುದಾಣಗಳನ್ನು ಕಾರ್ಯಕರ್ತರು ತೊಳೆದು ಶುಚಿಗೊಳಿಸಿದರು.

ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಕುಮಾರ ಧಾರಾ ಹಾಗೂ ದರ್ಪಣತೀರ್ಥ ನದಿ ಯಲ್ಲಿ ಪುಣ್ಯ ಸ್ನಾನ ಮಾಡಿ ನದಿಗೆ ತ್ಯಾಜ್ಯಗಳನ್ನು ಹಾಕುತ್ತಿದ್ದರು.

ಭಕ್ತರು ಎಸೆದ ಫೋಟೋಗಳನ್ನು, ತೆಂಗಿನಕಾಯಿ, ಸ್ನಾನ ಮಾಡಿ ಬಿಟ್ಟ ಬಟ್ಟೆಗಳು, ಸಾಬೂನು, ಕನ್ನಡಿ, ಚಾಚಣಿಕೆ, ಟೂತ್‌ ಬ್ರಶ್‌, ಚಪ್ಪಲಿಗಳು, ಮಕ್ಕಳ ಆಟಿಕೆಗಳು ಇತ್ಯಾದಿ ವಸ್ತುಗಳನ್ನು ತೆಗೆದು ರಾಶಿ ಹಾಕಿದರು.

Advertisement

ತಾಜ್ಯ ಹಾಕಬೇಡಿ:

ನದಿಗಳಿಗೆ ತ್ಯಾಜ್ಯ ಹಾಕಬಾರದು. ಭಕ್ತರು ಮೂಢನಂಬಿಕೆಗಳಿಗೆ ಒಳಗಾಗದೆ ಎಚ್ಚರಿಕೆ ಮತ್ತು ಹೊಣೆಗಾರಿಕೆಯಿಂದ ವರ್ತಿಸಬೇಕು. ಸ್ನಾನ ಮಾಡಿ ನದಿ ನೀರಿನಲ್ಲಿ ಬಟ್ಟೆ ಒಗೆಯುವುದು, ನೀರಿನಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಡುವುದನ್ನು ನಿಲ್ಲಿಸಿ ಪಾವಿತ್ರ್ಯ ಕಾಪಾಡಬೇಕು. ಕ್ಷೇತ್ರವನ್ನು ಅಪವಿತ್ರಗೊಳಿಸುವ ಯಾವುದೇ ಚಟುವಟಿಕೆಯನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಡಬಾರದು ಎಂದು ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮನವಿ ಮಾಡಿದರು.

ಕ್ಷೇತ್ರದ ಎರಡು ಪುಣ್ಯ ನದಿಗಳನ್ನು ಸ್ವಚ್ಛಗೊಳಿಸಿದ್ದೇವೆ. ಈ ವೇಳೆ ವಸತಿಗೃಹಗಳ ಮಲೀನ ನೀರನ್ನು ನದಿಗೆ ಬಿಡುತ್ತಿರುವುದು ಕಂಡು ಬಂದಿದೆ. ಇದಕ್ಕೆಲ್ಲ ನಿಯಂತ್ರಣ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಯುವ ಬ್ರಿಗೇಡ್‌ ರಾಜ್ಯ ಸಂಚಾಲಕ ಚಂದ್ರಶೇಖರ ಬೆಂಗಳೂರು, ಜಿಲ್ಲಾ ಸಂಚಾಲಕ ತಿಲಕ್‌ ಶಿಶಿಲ, ತಾಲೂಕು ಸಂಚಾಲಕ ಶರತ್‌, ಸುಳ್ಯ, ಸುಬ್ರಹ್ಮಣ್ಯ ಯುವ ಬ್ರಿಗೇಡ್‌ ಕಾರ್ಯಕರ್ತರು, ಸ್ವಯಂಸೇವಕರು ಉಪಸ್ಥಿತರಿದ್ದರು. ಬೆಂಗಳೂರು. ಮಡಿಕೇರಿ, ಮೈಸೂರು ಮೊದಲಾದ ಕಡೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಸ್ವಚ್ಛತಾ ಕಾರ್ಯಕ್ಕೆ ಪೂರ್ಣ ಸಹಕಾರ ಹಾಗೂ ಕಾರ್ಯಕರ್ತರಿಗೆ ಎರಡು ದಿನ ಊಟ, ವಸತಿ ಹಾಗೂ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಸ್ಥಳಿಯ ಗ್ರಾ.ಪಂ. ಕೂಡ ಸಹಕಾರ ನೀಡಿತ್ತು.

ಸ್ವಚ್ಛಗೊಳಿಸುವ ವೇಳೆ ಅಪಾರ ಪ್ರಮಾಣದ ತ್ಯಾಜ್ಯದ ಜತೆ 2 ಸಾವಿರಕ್ಕೂ ಹೆಚ್ಚು ಮದ್ಯದ ಬಾಟಲಿಗಳು ದೊರಕಿವೆ. ಇದನ್ನು ಕಂಡು ದಿಗ್ಬ್ರಮೆ ವ್ಯಕ್ತಪಡಿಸಿದ ಯುವ ಬ್ರಿಗೇಡ್‌ ಕಾರ್ಯಕರ್ತರು ಇಷ್ಟು ಪ್ರಮಾಣದಲ್ಲಿ ಮದ್ಯದ ಬಾಟಲಿಗಳು ಎರಡು ದಿನಗಳ ಸ್ವಚ್ಛತೆ ಕಾರ್ಯದ ವೇಳೆ ಸಿಕ್ಕಿವೆ. ಪವಿತ್ರ ಕ್ಷೇತ್ರದಲ್ಲೂ ದುಶ್ಚಟಗಳನ್ನು ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ದೊರಕಿರುವ ಮದ್ಯದ ಬಾಟಲಿಗಳೇ ಇದಕ್ಕೆ ಸಾಕ್ಷಿ. ಪುಣ್ಯಕ್ಷೇತ್ರಗಳು ಈ ರೀತಿ ಅಪವಿತ್ರವಾಗುತ್ತಿರುವುದು ಕಳವಳಕಾರಿ ಎಂದರು.

ಜಾಗೃತಿ ಕರಪತ್ರ:

ನದಿ ಹಾಗೂ ಪರಿಸರ ಸ್ವಚ್ಛಗೊಳಿಸಿದ ಕಾರ್ಯಕರ್ತರು ಅದರ ಜತೆ ರವಿವಾರ ಸ್ಥಳಿಯರಲ್ಲಿ ಹಾಗೂ ಭಕ್ತರಲ್ಲಿ ಜಾಗೃತಿ ಮೂಡಿಸಿದರು. ಯುವ ಬ್ರಿಗೇಡ್‌ ಕುಕ್ಕೆ ಸುಬ್ರಹ್ಮಣ್ಯ ಸಿದ್ಧಪಡಿಸಿದ ಕರಪತ್ರಗಳನ್ನು ಅಂಗಡಿಮುಂಗಟ್ಟುಗಳಿಗೆ, ಭಕ್ತರಿಗೆ ಕಾರ್ಯಕರ್ತರು ಹಂಚಿ ಸ್ವಚ್ಛತೆಯ ಪಾಠ ಬೋಧಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next