Advertisement

ನಾಗಾರಾಧನ ಕ್ಷೇತ್ರಗಳಲ್ಲಿ ಜನಸಾಗರ

02:27 AM Jul 08, 2019 | Team Udayavani |

ಸುಬ್ರಹ್ಮಣ್ಯ: ಆಷಾಢ ಮಾಸದ ಮೊದಲ ಪಂಚಮಿ ತಿಥಿ ವಿಶೇಷವಾಗಿದ್ದು, ಕರಾವಳಿಯ ನಾಗಾರಾಧನ ಕ್ಷೇತ್ರಗಳಿಗೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ರವಿವಾರ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಕಂಡು ಬಂದರು. ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಶ್ರೀ ದೇವರ ದರ್ಶನ ಪಡೆದರಲ್ಲದೆ ವಿವಿಧ ಸೇವೆಗಳನ್ನು ಪೂರೈಸಿದರು. ದೇಗುಲದ ಒಳಾಂಗಣ, ಹೊರಾಂಗಣ, ರಥಬೀದಿಗಳಲ್ಲಿ ಜನಜಂಗುಳಿಯಿತ್ತು. ಸೇವಾ ಕೌಂಟರುಗಳ ಮುಂದೆಯೂ ಉದ್ದದ ಸರತಿ ಸಾಲು ಕಂಡುಬಂತು.

Advertisement

ರವಿವಾರ ಕ್ಷೇತ್ರಕ್ಕೆ 20ರಿಂದ 25 ಸಾವಿರ ಭಕ್ತರು ಭೇಟಿ ನೀಡಿದ್ದು, 1,100 ಆಶ್ಲೇಷಾ ಬಲಿ ಸೇವೆ, 199 ಸರ್ಪ ಸಂಸ್ಕಾರ ಗಳು, 450 ಶೇಷಸೇವೆಗಳು, 150 ನಾಗಪ್ರತಿಷ್ಠೆ, 98 ತುಲಾಭಾರ ನಡೆದಿವೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಮೂಲಗಳು ತಿಳಿಸಿದೆ.

ಶ್ರೀ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿಯೂ 15 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಮುಂಜಾನೆ 6 ಗಂಟೆಯಿಂದಲೇ ಸರತಿಸಾಲಿನಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರಿಗೆ ಸೀಯಾಳ, ಹಾಲು, ಹಿಂಗಾರ, ಕೇದಗೆ ಹೂ, ಸಲ್ಲಿಸಿ ವಿಶೇಷವಾದ ಪಂಚಾಮೃತ ಹಾಗೂ ನಾಗತಂಬಿಲ ಸೇವೆ ಅರ್ಪಿಸಿದರು. ಸುಮಾರು 2,000 ಪಂಚಾಮೃತ ಅಭಿಷೇಕ, 3,000ದಷ್ಟು ನಾಗತಂಬಿಲ ಸೇವೆಗಳು ಸಮರ್ಪಣೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next