Advertisement
ಕುಕ್ಕೆ ಕ್ಷೇತ್ರದಲ್ಲಿ ಶನಿವಾರ ದೇವಸ್ಥಾನ ಹಾಗೂ ಖಾಸಗಿ ಕೊಠಡಿಗಳು ಭರ್ತಿಯಾಗಿವೆ. ಹೊರಗಿನ ಭಕ್ತರು ಕೊಠಡಿಗಳಿಗಾಗಿ ದೇವಸ್ಥಾನ ಕಚೇರಿಯನ್ನು ಸಂಪರ್ಕಿಸಿದರೆ ಕೊಠಡಿಗಳು ಖಾಲಿ ಇಲ್ಲ ಎನ್ನುವ ಉತ್ತರ ದೊರಕುತ್ತಿದೆ. ಶುಕ್ರವಾರ ಕ್ಷೇತ್ರಕ್ಕೆ ಆಗಮಿಸಿ ಕೊಠಡಿಗಾಗಿ ವಿಚಾರಿಸಿದಾಗಲೂ ಇಲ್ಲ ಎನ್ನುವ ಉತ್ತರಗಳು ದೊರಕಿವೆ.
ಭಕ್ತರ ಅನುಕೂಲತೆಗಾಗಿ ಆದಿಸುಬ್ರಹ್ಮಣ್ಯದಲ್ಲಿ ನಾಲ್ಕೆ çದು ವರ್ಷಗಳ ಹಿಂದೆ 230 ಕೊಠಡಿಗಳ ವಸತಿಗೃಹ ನಿರ್ಮಿಸಿದ್ದು, ಅದನ್ನು ಇನ್ನು ಬಳಕೆಗೆ ನೀಡಿಲ್ಲ. ವಸತಿಗೃಹಕ್ಕೆ ಪೀಠೊಪಕರಣ ಅಳವಡಿಸಿಲ್ಲ. ಕ್ಷೇತ್ರದಲ್ಲಿ ಜನಸಂದಣಿ ಹೆಚ್ಚಿದ್ದರೂ ಭಕ್ತರ ಅನುಕೂಲತೆಗೆ ಕೊಠಡಿಗಳನ್ನು ಒದಗಿಸಲು ಸೂಕ್ತ ವ್ಯವಸ್ಥೆಯನ್ನು ದೇಗುಲದ ವತಿಯಿಂದ ಮಾಡದೆ ಇರುವುದು ಕ್ಷೇತ್ರಕ್ಕೆ ಬರುವ ಭಕ್ತರನ್ನು ರಾತ್ರಿ ಜಾಗರಣೆ ಮಾಡುವಂತೆ ಮಾಡಿದೆ.
Related Articles
ನಾಗರಾಧನೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇವರ ದರ್ಶನ, ವಿಶೇಷ ಸೇವೆಗಳನ್ನು ನೆರವೇರಿಸಲು ದಿನನಿತ್ಯ ಸಾವಿರಾರು ಭಕ್ತರು, ರಾಜಕಾರಣಿಗಳು, ತಾರೆಯರು ಕ್ರೀಡಾಳುಗಳು ರಾಜ್ಯ, ಹೊರ ರಾಜ್ಯಗಳಿಂದ ಬರುತ್ತಾರೆ. ಇದರಂತೆ ಕುಕ್ಕೆಯಲ್ಲಿ ದೇಗುಲ ವತಿಯಿಂದ ಹಾಗೂ ಖಾಸಗಿ ಅವರ ಹಲವಾರು ವಸತಿಗೃಹಗಳು ನಿರ್ಮಾಣಗೊಂಡಿವೆ. ಇವುಗಳಲ್ಲಿ ಬಹುತೇಕ ಕೊಠಡಿಗಳಲ್ಲಿ ತಲಾ 20ರಂತೆ ಆನ್‌ಲೈನ್ ಬುಕ್ಕಿಂಗ್ ಮೂಲಕ ನೀಡಲಾಗುತ್ತದೆ. ದಿನವೊಂದಕ್ಕೆ 130ಕ್ಕೂ ಅಧಿಕ ಕೊಠಡಿಗಳು ಸರ್ಪಸಂಸ್ಕಾರ ಸೇವೆ ನಡೆಸುವರಿಗೆಂದು ಬುಕ್ಕಿಂಗ್ ಆಗಿರುತ್ತದೆ.
Advertisement
ವಿಶೇಷ ದಿನಗಳಲ್ಲಿ ಹಾಗೂ ರಜದಿನಗಳಾದ ಶನಿವಾರ, ರವಿವಾರ, ಇತರ ರಜಾದಿನಗಳಲ್ಲಿ ಕುಕ್ಕೆಯಲ್ಲಿ ವಸತಿಗೃಹಗಳು ಭರ್ತಿಗೊಂಡು ಅನಂತರ ಬರುವ ಭಕ್ತರಿಗೆ ಸಮಸ್ಯೆ ಎದುರಾಗುತ್ತದೆ. ಮೊದಲೇ ಬುಕ್ಕಿಂಗ್ ಮಾಡುವ ವ್ಯವಸ್ಥೆಯಿದ್ದರೂ ಸಮಸ್ಯೆ ಉಂಟಾಗುತ್ತಿದೆ ಎನ್ನುತ್ತಾರೆ ಭಕ್ತರು. ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಗೆ ಹೊಂದಿಕೊಳ್ಳದೆ ಇರುವವರು ನೇರವಾಗಿ ಬಂದು ವಸತಿಗೃಹಕ್ಕೆ ಬೇಡಿಕೆ ಇರಿಸಿದರೆ ಅಂತವರಿಗೆ ಕೊಠಡಿ ಸಿಗುತ್ತಿಲ್ಲ. ಮಹಿಳೆಯರು, ವೃದ್ಧರು, ಸಣ್ಣ ಮಕ್ಕಳ ಜತೆ ರಸ್ತೆ, ಮರದ ಕೆಳಗೆ, ಕಟ್ಟಡಗಳ ಆವರಣದಲ್ಲಿ ಚಳಿಗೆ ಮೈಯೊಡ್ಡಿ ಮಲಗುವ ಸ್ಥಿತಿ ಇದ್ದರೂ ದೇಗುಲದ ಕಚೇರಿಗಳಲ್ಲಿರುವ ಅಧಿಕಾರಿಗಳು ಈ ಬಗ್ಗೆ ಚಕಾರವೆತ್ತುತ್ತಿಲ್ಲ.
ನಾಮಫಲಕ ಮಾಮೂಲು!ದೇಗುಲ ವಸತಿಗೃಹಗಳ ಮುಂದೆ ಕೊಠಡಿ ಖಾಲಿ ಇಲ್ಲ ಎನ್ನುವ ನಾಮಫಲಕ ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿದೆ. ದೇಗುಲದ ಕೊಠಡಿ ಸಮಸ್ಯೆಯಿಂದಾಗಿ ಭಕ್ತರು ಖಾಸಗಿ ವಸತಿಗೃಹಗಳ ಮೊರೆ ಹೋಗುತ್ತಿದ್ದರೂ ಸಾಮಾನ್ಯ ವರ್ಗದ ಭಕ್ತರಿಗೆ ಹೊರೆಯಾಗುತ್ತಿದೆ. ವಿಶೇಷ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಕೊಠಡಿಗಳ ಬಾಡಿಗೆ ವೆಚ್ಚ ಕೂಡ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. ಕ್ರಮಕ್ಕೆ ಆಗ್ರಹ
ಆದಾಯ ಗಳಿಕೆಯಲ್ಲಿ 100 ಕೋಟಿ ರೂ. ಹೊಂದಿ ನಂ. 1 ಸ್ಥಾನದಲ್ಲಿರುವ ಕುಕ್ಕೆಯಲ್ಲಿ ವಸತಿಗೃಹ ಸಮಸ್ಯೆಯಿಂದ ಭಕ್ತರು ಕಂಗಾಲಾಗಿದ್ದಾರೆ. ರಸ್ತೆ ಬದಿ, ಬಸ್ ನಿಲ್ದಾಣಗಳಲ್ಲಿ ಮಲಗುವ ಪರಿಸ್ಥಿತಿ ಸಿರಿವಂತ ದೇವಸ್ಥಾನದಲ್ಲಿದೆ. ಇದನ್ನು ತಪ್ಪಿಸಲು ದೇಗುಲದ ವತಿಯಿಂದ ವಸತಿಗೃಹಗಳ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಜತೆಗೆ ಪೂರ್ಣಗೊಳ್ಳಬೇಕಿರುವ ಕಟ್ಟಡಗಳನ್ನು ಶೀಘ್ರ ಬಳಕೆಗೆ ಸಿಗುವಂತೆ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ವ್ಯವಸ್ಥಾಪನ ಸಮಿತಿ ಇಲ್ಲದೆಯೂ ಭಕ್ತರ ಸಮಸ್ಯೆಯನ್ನು ಕೇಳುವವರಿಲ್ಲ. ಅಧಿಕಾರಿಗಳು ಪ್ರತಿ ಸಮಸ್ಯೆ ಹೇಳಿಕೊಂಡಾಗಲು ಏನಾದರೊಂದು ನೆವ ಹೇಳಿ ಅಸಹಾಯಕತೆ ವ್ಯಕ್ತಪಡಿಸಿ ಜಾರಿಕೊಳ್ಳುತ್ತಿದ್ದಾರೆ. ಸೂಚನೆ ಕೊಡುವೆ
ಮುಂದಿನ ಎರಡು ದಿನಗಳಲ್ಲಿ ಭಕ್ತರು ಹೆಚ್ಚು ಪ್ರಮಾಣದಲ್ಲಿ ಆಗಮಿಸುವ ಬಗ್ಗೆ ಮಾಹಿತಿ ಇದೆ. ದೇಗುಲದಲ್ಲಿ ಕೊಠಡಿ ಸಮಸ್ಯೆ ಎದುರಾಗುವ ಬಗ್ಗೆ ಸಮಸ್ಯೆ ಸರಿದೂಗಿಸಲು ಸಂಬಂಧಿಸಿದವರಿಗೆ ಸೂಚಿಸುವೆ.
– ಎಂ.ಜೆ.ರೂಪಾ , ಅಪರ ಡಿಸಿ, ಸುಬ್ರಹ್ಮಣ್ಯ ದೇಗುಲದ ಆಡಳಿತಾಧಿಕಾರಿ ಬೇರೆ ಏನಾದರೂ ಕೇಳಿ
ದೇವಸ್ಥಾನದಲ್ಲಿ ಕೊಠಡಿ ಕೇಳಿದರೆ ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳಿ ಎನ್ನುವ ಉತ್ತರ ನೀಡುತ್ತಿದ್ದಾರೆ. ವಯಸ್ಸಾದವರೂ ನಮ್ಮ ಜತೆ ಇರುವಾಗ ನಾವೆಲ್ಲಿ ವಾಸ್ತವ್ಯ ಹೂಡುವುದು ಗೊತ್ತಾಗುತ್ತಿಲ್ಲ. ಇಷ್ಟೊಂದು ಕಡೆಗಣಿಸುವುದಕ್ಕೆ ಮತ್ತು ಇಲ್ಲಿನ ವ್ಯವಸ್ಥೆ ಕಂಡು ಬಹಳ ಬೇಸರವಾಗಿದೆ.
-ದೇವಮ್ಮ, ದಾವಣೆಗೆರೆ ನಿವಾಸಿ ದಯಾನಂದ ಕಲ್ನಾರ್