Advertisement
ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವೂ ಪುರಾಣ, ಇತಿಹಾಸ ಕಾಲದಿಂದಲೂ ನಾಗಾರಾಧನೆಗೆ ಪ್ರಸಿದ್ಧಿ. ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭೀಷ್ಟ ಪ್ರದಾಯಕನಾಗಿ ಶ್ರೀ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಇಲ್ಲಿನ ಅನ್ನದಾನಕ್ಕೆ ದೈವಿಕ ಮಹತ್ವವಿದೆ.ಅನ್ನ ಸಿದ್ಧಪಡಿಸಲು ಸೋಲಾರ್ ಚಾಲಿತ ಆಧುನಿಕ ಶೈಲಿಯ ಹವಾನಿಯಂತ್ರಿತ ವ್ಯವಸ್ಥೆ ಇದೆ. 15,000 ಮಂದಿಗೆ ಅಡುಗೆ ಸಿದ್ಧಪಡಿಸುವ ಸಾಮರ್ಥ್ಯರುವ 3 ದೊಡ್ಡ ಗಾತ್ರದ ಬಾಯ್ಲರ್‌ಗಳಿವೆ. ಅನ್ನ, ಪಾಯಸ, ಸಾಂಬಾರು ತಯಾರಿಕೆಗೆ ಇದು ಬಳಕೆಯಾಗುತ್ತದೆ. ಗ್ಯಾಸ್ ಸಿಲಿಂಡರ್‌ನಲ್ಲಿ ಅಡುಗೆ ತಯಾರಾಗುತ್ತದೆ.
Related Articles
ದೇಗುಲದ ಆವರಣದಲ್ಲಿಯೇ, ಸುಸಜ್ಜಿತ ಷಣ್ಮುಖ ಭೋಜನಾ ಶಾಲೆಯಿದೆ. ಮೇಲಿನ ಮಹಡಿಯಲ್ಲೂ ಭೋಜನ ವಿತರಣೆ ವ್ಯವಸ್ಥೆಯಿದೆ. ಒಂದು ಸಲಕ್ಕೆ 15 ಸಾವಿರ ಮಂದಿ ಕುಳಿತು ಊಟ ಮಾಡುತ್ತಾರೆ. ಸರ್ಪಸಂಸ್ಕಾರ ಸೇವೆ ನಡೆಸುವ ಭಕ್ತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇದೆ.
Advertisement
ರಾಮ- ಲಕ್ಷ್ಮಣರ ಕೊಪ್ಪರಿಗೆಚಂಪಾಷಷ್ಠಿ ವೇಳೆ ಇಲ್ಲಿರುವ “ರಾಮ-ಲಕ್ಷ್ಮಣ’ ಎಂಬ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆ ಮಹತ್ವ ಪಡೆದುಕೊಳ್ಳುತ್ತದೆ. ಈ ಜೋಡಿ ಅನ್ನಕೊಪ್ಪರಿಗೆಗೆ ವಿಶೇಷ ಪೂಜೆ ಸಂದ ಬಳಿಕ, ದೇಗುಲದ ಒಳಾಂಗಣದ ಎರಡು ಒಲೆಗಳ ಮೇಲೆ ಅದನ್ನು ಏರಿಸಲಾಗುತ್ತದೆ. ಕೊಪ್ಪರಿಗೆಯಲ್ಲಿ ಸಿದ್ಧವಾದ ಅನ್ನ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗುತ್ತದೆ.
– ಮಧ್ಯಾಹ್ನ 11.30ರಿಂದ 3 ಗಂಟೆ ತನಕ
– ರಾತ್ರಿ 7.30ರಿಂದ 9.30
ಏಕಾದಶಿಗೆ ಉಪಹಾರ
ಏಕಾದಶಿ ದಿನಗಳಲ್ಲಿ ಊಟವಿರುವುದಿಲ್ಲ; ಉಪಾಹಾರ ವ್ಯವಸ್ಥೆ ಇರುತ್ತದೆ. ಆಗೆಲ್ಲಾ ಉಪ್ಪಿಟ್ಟು, ಅವಲಕ್ಕಿ, ಮೊಸರು ವಿತರಿಸಲಾಗುತ್ತದೆ. ಭಕ್ಷ್ಯ ಸಮಾಚಾರ
– ನಿತ್ಯವೂ ಅನ್ನ- ತಿಳಿಸಾರು, ಸಾಂಬಾರು, ಚಟ್ನಿ, ಗಟ್ಟಿ ಪಲ್ಯ, ಪಾಯಸ, ಮಜ್ಜಿಗೆ
– ಕುಂಬಳಕಾಯಿ, ಚೀನಿಕಾಯಿ, ಟೊಮೇಟೊ, ಸೌತೆಕಾಯಿ, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು… ಇಲ್ಲಿ ಹೆಚ್ಚು ಬಳಕೆಯಾಗುವ ತರಕಾರಿ. ಎಲೆ ಊಟ ವಿಶೇಷ
ಬಾಳೆಎಲೆ ಮತ್ತು ಪತ್ರಾವಳಿ ಎಲೆಯಲ್ಲಿ ನಿತ್ಯವೂ ಊಟ. ಡಿಶ್‌ವಾಟರ್ ವ್ಯವಸ್ಥೆ ಇತ್ತೀಚೆಗೆ ಸಿದ್ಧಗೊಂಡಿದ್ದು, ಶೀಘ್ರವೇ ಬಟ್ಟಲು ಊಟ ಕಾರ್ಯಾರಂಭ ಆಗಲಿದೆ. ಸಂಖ್ಯಾ ಸೋಜಿಗ
20- ನಿಮಿಷದಲ್ಲಿ ಅಡುಗೆ ರೆಡಿ
20- ಕ್ವಿಂಟಲ್ ಅಕ್ಕಿ ನಿತ್ಯ ಬಳಕೆ
1200- ಲೀಟರ್ ಸಾಂಬಾರು
600- ತೆಂಗಿನಕಾಯಿಂದ ಚಟ್ನಿ
500- 600- ಕ್ವಿಂಟಲ್ ತರಕಾರಿ ನಿತ್ಯ ಅವಶ್ಯ
2000- ವಿದ್ಯಾರ್ಥಿಗಳಿಗೆ ಇಲ್ಲಿಂದಲೇ ಬಿಸಿಯೂಟ
7- ಬಾಣಸಿಗರಿಂದ ಅಡುಗೆ ತಯಾರಿ
15- ಸಿಬ್ಬಂದಿಯಿಂದ ಪಾಕಶಾಲೆ ಪರಿಸರ ಸ್ವತ್ಛತೆ
250- ಲೀಟರ್ ಹಾಲು ನಿತ್ಯ ಬಳಕೆ
250- ಲೀಟರ್ ಮೊಸರು ಬಳಕೆ
48- ಸಿಬ್ಬಂದಿ ಊಟ ಬಡಿಸಲು…
20,000- ಭಕ್ತರಿಗೆ ನಿತ್ಯ ಅನ್ನಪ್ರಸಾದ
70,00,000- ಭಕ್ತರು ಕಳೆದವರ್ಷ ಭೋಜನ ಸವಿದವರು ಕಳೆದ 14 ವರ್ಷದಿಂದ ಶುಚಿ- ರುಚಿಯಾದ ಅಡುಗೆ ತಯಾರಿ ನಡೆಸುತ್ತಿದ್ದೇವೆ. ಅನ್ನದಾನ ಮಾಡಿದಷ್ಟೇ ಪುಣ್ಯ, ಈ ಸೇವೆಯಿಂದ ದೊರಕಿದ ಸಂತೃಪ್ತಿ ನಮಗೆ ದಕ್ಕುತ್ತಿದೆ.
– ಪಿ. ಗೋವಿಂದ ಭಟ್, ಹಿರಿಯ ಬಾಣಸಿಗ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಎಷ್ಟೇ ಪ್ರಮಾಣದಲ್ಲಿ ಇದ್ದರೂ, ಎಂದೂ ಅವರಿಗೆ ಭೋಜನ ಪ್ರಸಾದಕ್ಕೆ ಕೊರತೆ ಆಗಿಲ್ಲ. ಇದು ದೇವರ ಮಹಿಮೆ. ಅಷ್ಟೊಂದು ಅಚ್ಚುಕಟ್ಟಾಗಿ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.
– ನಿತ್ಯಾನಂದ ಮುಂಡೋಡಿ, ಅಧ್ಯಕ್ಷ, ವ್ಯವಸ್ಥಾಪನ ಸಮಿತಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ – ಬಾಲಕೃಷ್ಣ ಭೀಮಗುಳಿ