Advertisement

ಕುಕ್ಕೆ ಸುಬ್ರಹ್ಮಣ್ಯ: 300 ಕೋಟಿ ರೂ. ವೆಚ್ಚದ 3ನೇ ಹಂತದ ಕಾಮಗಾರಿ ಶೀಘ್ರವೇ ಆರಂಭ: ಜೊಲ್ಲೆ

03:49 PM Feb 08, 2022 | Team Udayavani |

ಬೆಂಗಳೂರು: ದೈವಸಂಕಲ್ಪ ಯೋಜನೆಯ ಅಡಿಯಲ್ಲಿ ಕುಕ್ಕೇ ಸುಬ್ರಮಣ್ಯ ದೇವಸ್ಥಾನದ ಮೂರನೇ ಹಂತದ ಮಾಸ್ಟರ್‌ ಪ್ಲಾನ್‌ ನ ಪ್ರಸ್ತಾವಿತ ಕಾಮಗಾರಿಗಳನ್ನು ಅಂತಿಮಗೊಳಿಸಲಾಗಿದ್ದು ಶೀಘ್ರದಲ್ಲಿ ಸಚಿವ ಸಂಪುಟ ಸಭೆಯ ಮುಂದಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.

Advertisement

ಮಂಗಳವಾರ (ಫೆ.08) ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ತಮ್ಮ ಭೇಟಿಯ ನೆನೆಪಿಗಾಗಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನಡೆಸಲಾಗುತ್ತಿರುವ ವನಸಂವರ್ಧನಾ ಕಾರ್ಯಕ್ರಮ ದ ಅಂಗವಾಗಿ ನಾಗಸಂಪಿಗೆ ಗಿಡವನ್ನು ನೆಟ್ಟರು. ನಂತರ ಅಂಗಾರ ಹಾಗೂ ಜಿಲ್ಲಾಧಿಕಾರಿಗಳಾದ ಡಾ ರಾಜೇಂದ್ರ ಅವರ ಉಪಸ್ಥಿತಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ 300 ಕೋಟಿ ರೂಪಾಯಿಗಳ ಮೂರನೇ ಹಂತದ ಮಾಸ್ಟರ್‌ ಪ್ಲಾನ್‌ನ್ನು ಪ್ರಸ್ತಾವಿಸಲಾಗಿದೆ. ಈ ಪ್ರಸ್ತಾವಿತ ಮಾಸ್ಟರ್‌ ಪ್ಲಾನ್‌ ನ ಬಗ್ಗೆ ಬೆಂಗಳೂರಿನಲ್ಲಿ ಹಾಗೂ ಇಂದು ನಡೆದ ಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ಕಾಮಗಾರಿಗಳನ್ನು ಅಂತಿಮಗೊಳಿಸಿದ್ದು ಶೀಘ್ರದಲ್ಲೇ ಸಚಿವ ಸಂಪುಟ ಸಭೆಯ ಮುಂದಿರಿಸಿ ಒಪ್ಪಿಗೆ ಪಡೆದು ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಗೋಶಾಲೆ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ: ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವತಿಯಿಂದ 100 ಎಕರೆ ಪ್ರದೇಶದಲ್ಲಿ ಗೋಶಾಲೆಯನ್ನು ನಿರ್ಮಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಲಾಯಿತು. ಕುಕ್ಕೆ ಸುಬ್ರಮಣ್ಯದ ಸ್ನಾನ ಘಟ್ಟದ ಬಳಿ ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯದೆ ಈ ಗೋಶಾಲೆಯನ್ನು ನಿರ್ಮಿಸಲಾಗುವುದು. ಈ ಬಗ್ಗೆ ವಿಸ್ತ್ರತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಆಡಿಟ್‌ ವರದಿ ಶೀಘ್ರ ಸಲ್ಲಿಸುವಂತೆ ಗಡುವು: ರಾಜ್ಯದ ಏ ಮತ್ತು ಬಿ ದರ್ಜೆಯ ದೇವಸ್ಥಾನಗಳಿಗೆ ಪ್ರತಿವರ್ಷ ಆಡಿಟ್‌ ವರದಿ ಸಲ್ಲಿಸುವುದು ಕಡ್ಡಾಯ. ಆದರೆ ಹಲವಾರು ವರ್ಷಗಳಿಂದ ಕೇವಲ ನಾಲ್ಕು ದೇವಸ್ಥಾನಗಳು ಆಡಿಟ್‌ ವರದಿಯನ್ನು ಸಲ್ಲಿಸುತ್ತಿದ್ದವು. ಬೇರೆ ದೇವಸ್ಥಾನಗಳು ಆಡಿಟ್‌ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಈ ಬಗ್ಗೆ ಕಳೆದ ನವೆಂಬರ್‌ ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟೀಸ್‌ ನೀಡಲಾಗಿತ್ತು. ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಿಟ್‌ ವರದಿಯನ್ನೂ 2012-13 ನೇ ಸಾಲಿನಿಂದ ನಿಯಮಿತವಾಗಿ ಸರಕಾರಕ್ಕೆ ಸಲ್ಲಿಸಲಾಗಿಲ್ಲ. ನೋಟೀಸ್‌ ನೀಡಿದ ನಂತರ 3 ವರ್ಷಗಳ ಆಡಿಟ್‌ ವರದಿಯನ್ನು ಸಲ್ಲಿಸಲಾಗಿದೆ. ಇನ್ನು ಬಾಕಿ ಉಳಿದಿರುವ ವರ್ಷಗಳ ಆಡಿಟ್‌ ವರದಿಯನ್ನು ಮಾರ್ಚ್‌ 31 ರ ಒಳಗಾಗಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಮಂತ್ರಿಗಳು ನೀಡಿದರು.

Advertisement

ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು. ಈ ಮೂಲಕ ಅಭಿವೃದ್ದಿಗೆ ಅಡ್ಡಿಯಾಗಿರುವ ಆತಂಕಗಳನ್ನು ನಿವಾರಿಸಿಕೊಳ್ಳಬೇಕು. ಆಶ್ಲೇಷ ಬಲಿ ಹಾಗೂ ಸರ್ಪಸಂಸ್ಕಾರ ದ ಸ್ಲಾಟ್‌ಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಚಿಂತನೆ ನಡೆಸಬೇಕು. ದೇವಸ್ಥಾನದ ಸುರಕ್ಷತೆಗಾಗಿ 60 ಹೋಮ್‌ ಗಾರ್ಡ್‌ಗಳನ್ನು ನಿಯಮಿತವಾಗಿ ನೇಮಕ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ದೊರಕಿಸಿಕೊಡಲಾಗುವುದು ಎಂದು ಹೇಳಿದರು.

35 ವರ್ಷದ ಮುಂದಿನ ಸ್ಥಿತಿಯ ಅಂದಾಜಿನಲ್ಲಿ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಿ: ಇಂದಿನ ಅವಶ್ಯಕತೆಗೆ ತಕ್ಕಂತೆ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳುವುದು ಸರಿಯಲ್ಲ. ಮುಂದಿನ 35 ವರ್ಷಗಳ ನಂತರವೂ ಈ ಅಭಿವೃದ್ದಿ ಕಾರ್ಯ ಪ್ರಸ್ತುತವಾಗಿರಬೇಕು. ದೇವಸ್ಥಾನದ ಸುತ್ತಮುತ್ತಲ ಹಸಿರನ್ನು ಕಾಪಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಹೇಳಿದರು.

ದೈವ ಸಂಕಲ್ಪ ಯೋಜನೆಯ ಅಡಿಯಲ್ಲಿ ಮೊದಲ ಹಂತವಾಗಿ ರಾಜ್ಯದ 25 ದೇವಸ್ಥಾನಗಳನ್ನು ಸಮಗ್ರ ಅಭಿವೃದ್ದಿಗೊಳಿಸುವ ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದ ದೇವಸ್ಥಾನಗಳನ್ನು ಸಮಗ್ರ ಅಭಿವೃದ್ದಿಗೊಳಿಸುವುದು ಹಾಗೂ ಭಕ್ತರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮೀನುಗಾರಿಕೆ ಸಚಿವರಾದ ಅಂಗಾರ, ಜಿಲ್ಲಾಧಿಕಾರಿ ಡಾ ರಾಜೇಂದ್ರ, ಕುಕ್ಕೇ ಸುಬ್ರಮಣ್ಯ ದೇವಸ್ಥಾನದ ಅಧ್ಯಕ್ಷರಾದ ಮೋಹನ್‌ ರಾಮ್‌ ಸುಳ್ಳಿ, ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿ ಡಾ ನಿಂಗಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next