Advertisement
ಓಕುಳಿ ಪೂಜೆ, ಓಕುಳಿ ಚೆಲ್ಲಾಟಬೆಳಗ್ಗೆ ದೇಗುಲದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನೆರವೇರಿತು. ಬಳಿಕ ದೇವರಿಗೆ ಓಕುಳಿ ಸಮರ್ಪಣೆಯಾಗಿ ಭಕ್ತರಿಗೆ ಓಕುಳಿ ಪ್ರೋಕ್ಷಣೆ ಮತ್ತು ಓಕುಳಿ ಚೆಲ್ಲಾಟ ನಡೆಯಿತು. ಅನಂತರ ಶ್ರೀ ದೇವರ ಅವಭೃಥ ಉತ್ಸವದ ಸವಾರಿ ಶ್ರೀ ದೇಗುಲದಿಂದ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನೆರವೇರಿತು.
ಕುಮಾರಧಾರಾ ನದಿಯ ಮತ್ಸ್ಯ ತೀರ್ಥದಲ್ಲಿ ಶ್ರೀ ದೇವರ ನೌಕಾವಿಹಾರ ನಡೆಯಿತು. ಕುಮಾರಧಾರೆಯ ಮತ್ಸ್ಯತೀರ್ಥದ ಶ್ರೀ ದೇವರ ಜಳಕದಗುಂಡಿಯಲ್ಲಿ ಶ್ರೀ ದೇವರ ಅವಭೃಥ ಉತ್ಸವದ ಧಾರ್ಮಿಕ ವಿಧಿವಿಧಾನವನ್ನು ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯ ನೆರವೇರಿಸಿದರು. ಜಳಕದ ಬಳಿಕ ಕುಮಾರಧಾರಾ ನದಿತೀರದ ಅವಭೃಥ ಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನೆರವೇರಿತು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃಥ ಉತ್ಸವದ ಸಂದರ್ಭದಲ್ಲಿ ಕ್ಷೇತ್ರದ ಗಜರಾಣಿ ಯಶಸ್ವಿ ಎಲ್ಲರಂತೆ ತಾನೂ ಕೂಡ ಸ್ನಾನ ಮಾಡಿ, ಜಲಕ್ರೀಡೆಯಾಡಿ ಸಂಭ್ರಮಿಸಿತು. ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರ ಶೇಖರ ಪೇರಾಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಮಾಧವ ಡಿ., ಮಾಸ್ಟರ್‌ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಮತ್ತು ಭಕ್ತರು ಉಪಸ್ಥಿತರಿದ್ದರು. ಅನಂತರ ದೇಗುಲಕ್ಕೆ ಶ್ರೀ ದೇವರ ಸವಾರಿ ಹೊರಟಿತು. ಅಲ್ಲಲ್ಲಿ ಭಕ್ತರು ಹೂ, ಹಣ್ಣುಕಾಯಿ, ಕರ್ಪೂರಾರತಿಗಳನ್ನು ದೇವರಿಗೆ ಸಮರ್ಪಿಸಿದರು.
Related Articles
ಡಿ. 1ರಂದು ಕೊಪ್ಪರಿಗೆ ಇಳಿಯುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಅಂದು ರಾತ್ರಿ ನೀರಿನಲ್ಲಿ ಶ್ರೀ ದೇವರ ಬಂಡಿ ಉತ್ಸವ ನಡೆಯಲಿದೆ. ದೇಗುಲದ ಹೊರಾಂಗಣದ ಸುತ್ತಲೂ ನೀರನ್ನು ತುಂಬಿಸಲಾಗುತ್ತದೆ. ರಾತ್ರಿ ಮಹಾ ಪೂಜೆಯ ಬಳಿಕ ಪಾಲಕಿ ಉತ್ಸವ ನೆರವೇರಿದ ಬಳಿಕ ನೀರಿನಲ್ಲಿ ಶ್ರೀ ದೇವರ ಬಂಡಿ ರಥೋತ್ಸವ ನಡೆಯುವುದು.
Advertisement