Advertisement

Kukke Subrahmanya: ಸಂಭ್ರಮದ ಲಕ್ಷದೀಪೋತ್ಸವ

12:13 AM Dec 13, 2023 | Team Udayavani |

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ವೈಭವದ ಲಕ್ಷದೀಪೋತ್ಸವ ನೆರವೇರಿತು.

Advertisement

ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ದೇವಸ್ಥಾನದ ಅರ್ಚಕರು ಉತ್ಸವದ ವಿಧಿ ವಿಧಾನ ನೆರವೇರಿಸಿದರು. ರಥಬೀದಿಯಿಂದ ಕಾಶಿಕಟ್ಟೆ ತನಕ ಬೆಳಗಿದ ಲಕ್ಷ ಹಣತೆ ದೀಪದ ನಡುವೆ ಭಕ್ತರ ಪರಾಕುಗಳೊಂದಿಗೆ ಶ್ರೀ ದೇವರ ಲಕ್ಷದೀಪೋತ್ಸವ ರಥೋತ್ಸವ ನೆರವೇರಿತು. ಈ ಮೂಲಕ ಶ್ರೀ ದೇವರ ರಥಬೀದಿ ಉತ್ಸವ ಆರಂಭವಾಯಿತು.

ಇದಕ್ಕೂ ಪೂರ್ವನಲ್ಲಿ ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಂಕೃತ ರಂಗಪೂಜೆ ನಡೆಯಿತು. ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ನೆರವೇರಿತು. ಮಹಾಪೂಜೆಯ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವ ಆರಂಭವಾಯಿತು.

ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ಅನಂತರ ಆಕರ್ಷಕ ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ಮತ್ತು ವಿವಿಧ ಸಂಗೀತ ವಾದ್ಯಗಳ ಸುತ್ತುಗಳು ನೆರವೇರಿತು.

ಹೊರಾಂಗಣ ಉತ್ಸವದ ಬಳಿಕ ರಥಬೀದಿಗೆ ಆಗಮಿಸಿದ ಶ್ರೀ ದೇವರು ಪಂಚ ಶಿಖರಗಳನ್ನಳಗೊಂಡ ಚಂದ್ರಮಂಡಲ ರಥದಲ್ಲಿ ಆರೂಢರಾಗಿ ಪೂಜೆ ಸ್ವೀಕರಿಸಿದರು. ಬಳಿಕ ಶ್ರೀ ದೇವಳದಿಂದ ಕಾಶಿಕಟ್ಟೆ ತನಕ ಉತ್ಸವ ನೆರವೇರಿತು. ಶ್ರೀ ದೇವರು ಚಂದ್ರಮಂಡಲ ರಥದಲ್ಲಿ ಕಾಶಿಕಟ್ಟೆಗೆ ಆಗಮಿಸುವುದು ಕೇವಲ ಲಕ್ಷ ದೀಪೋತ್ಸವದ ದಿನ ಮಾತ್ರ ಅನ್ನುವುದು ವಿಶೇಷ.

Advertisement

ಬೀದಿ ಉರುಳು ಸೇವೆ ಆರಂಭ
ಚಂದ್ರಮಂಡಲ ರಥೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸಿದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟವಾದ ಈ ಸೇವೆಯನ್ನು ಸ್ವಯಂಸ್ಫೂರ್ತಿಯಿಂದ ಭಕ್ತರು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ತನಕ ನೆರವೇರಿಸುತ್ತಾರೆ.

ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ
ಸುಬ್ರಹ್ಮಣ್ಯ/ಮಂಗಳೂರು: ಲಕ್ಷದೀಪೋತ್ಸವದ ಸಂಭ್ರಮದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ, ಸುಳ್ಯದಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಮಳೆಯ ಮಧ್ಯೆ ಭಜನಾರ್ಥಿಗಳು ಕುಣಿತ ಭಜನೆ ನೆರವೇರಿಸಿದರು. ಸಂಜೆ ಗುತ್ತಿಗಾರು ಪರಿಸರದಲ್ಲಿ ಮಳೆಯಾಗಿತ್ತು. ಬೆಳ್ತಂಗಡಿ, ಕೊಲ್ಲಮೊಗ್ರ ಮೊದಲಾದೆಡೆಗಳಲ್ಲೂ ಮಳೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next