ಸುಬ್ರಹ್ಮಣ್ಯ : ದೇಗುಲದ ಆನೆ ಯಶಸ್ವಿಗೆ ತಂಗುವುದಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಅಂಗಡಿಗುಡ್ಡೆಯಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ಆನೆಗೆ ಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಜಾಗದ ಕೊರತೆಯಿಂದ ಸಮಸ್ಯೆಯಾಗುತ್ತಿರುವುದನ್ನು ಮನಗಂಡ ದೇವಸ್ಥಾನದ ಆಡಳಿತ ಮಂಡಳಿ ಹೊಸದಾಗಿ ಆನೆಗೆ ಶೆಡ್ ನಿರ್ಮಿಸಿದೆ. ಮುಂದೆ ಇದರ ಪಕ್ಕದಲ್ಲೇ ಸುಸಜ್ಜಿತ ಉದ್ಯಾನವನ ನಿರ್ಮಿಸುವ ಚಿಂತನೆ ಇದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ದೇವಸ್ಥಾನದ ವತಿಯಿಂದ ಆದಿ ಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗಶಾಲೆ ಬಳಿ 8.40ಲಕ್ಷ ರೂ. ವೆಚ್ಚದ ಗೋಪೂಜಾ ಮಂದಿರ ಹಾಗೂ ದೇಗುಲದ ಆನೆಗೆ ಇಂಜಾಡಿ ಬಳಿ 24.50 ಲಕ್ಷ ರೂ . ವೆಚ್ಚದಲ್ಲಿ ನಿರ್ಮಿಸಲಾದ ಶೆಡ್ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಪಸಂಸ್ಕಾರ ನೆರವೇರಿಸುವ ಭಕ್ತರಿಗೆ ಯಾಗ ಶಾಲೆ ಬಳಿ ಗೋಪೂಜೆ ನಡೆಸಲು ಸೂಕ್ತ ವ್ಯವಸ್ಥೆಗಳು ಇರಲಿಲ್ಲ. ಹೀಗಾಗಿ ಗೋಪೂಜೆಗೆ ಅನುಕೂಲವಾಗುವಂತೆ ಸುಸಜ್ಜಿತ ಗೋಪೂಜೆ ಮಂದಿರ ನಿರ್ಮಿಸಿದ್ದು, ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ. ದೇವಸ್ಥಾನದ ಆನೆ ಸ್ವಚ್ಛಂದವಾಗಿರಲು ವ್ಯವಸ್ಥಿತ ಶೆಡ್ ನಿರ್ಮಾಣವಾಗಿದ್ದು, ಆನೆಗೆ ತಿರುಗಾಡಲು ಸಹಿತ ಎಲ್ಲದಕ್ಕೂ ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ. ಮುಂದಿನ ದಿನಗಳಲ್ಲಿ ಆನೆ ಶೆಡ್ ಬಳಿ ಮಾವುತರಿಗೆ ತಂಗಲು ಪ್ರತ್ಯೇಕ ಕೊಠಡಿ, ನೀರಿನ ಕೊಳ ಇತ್ಯಾದಿಗ ಳನ್ನು ನಿರ್ಮಿಸಿ ಪರಿಸರವನ್ನು ಉದ್ಯಾನವನ್ನಾಗಿಸುವುದು ಗುರಿಯಾಗಿದೆ ಎಂದರು.
ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ
ಗೋಶಾಲೆ ಮಂದಿರ ಉದ್ಘಾಟನೆ ವೇಳೆ ದೇಗುಲದ ಅರ್ಚಕ ಮಧುಸೂದನ ಕಲ್ಲೂರಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಆನೆ ಶೆಡ್ ಉದ್ಘಾಟನೆ ಸಂದರ್ಭ ವೇ|ಮೂ| ವಾಸುದೇವ ರಾವ್ ವೈದಿಕ ವಿಧಿ-ವಿಧಾನ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಆದಿಸುಬ್ರಹ್ಮಣ್ಯ ಬಳಿಯಿಂದ ಪುರುಷರಾಯ ಬೆಟ್ಟಕ್ಕೆ ತೆರಳುವ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ದೇಗುಲದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಮಾಧವ ಡಿ., ರಾಜೀವಿ ಆರ್.ರೈ, ದಮಯಂತಿ ಕೂಜುಗೋಡು, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಜಿಲ್ಲಾ ಧಾ.ಪ.ರಿಷತ್ ಸದಸ್ಯೆ ವಿಮಲಾ ರಂಗಯ್ಯ, ದೇಗುಲದ ಅಭಿಯಂತರ ಉದಯ ಕುಮಾರ್, ಹೆಬ್ಟಾರ್ ಷಣ್ಮುಖ ಉಪರ್ಣ, ಕೆ.ಎಸ್. ಎಸ್. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ.ಆರ್. ಶೆಟ್ಟಿಗಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲರಂಗಯ್ಯ, ಎಸಿಎಫ್ ತ್ಯಾಗರಾಜ್, ಎಸ್., ಸತೀಶ್ ಕೂಜುಗೋಡು, ರಾಜೇಶ್ ಎನ್.ಎಸ್. ನಿತಿನ್ ಭಟ್, ರೋಹಿತ್ ಗುತ್ತಿಗೆದಾರರಾದ ಕೃಷ್ಣಕುಮಾರ್ ಬಾಳುಗೋಡು, ಗಿರೀಶ್ ಮೆದು, ಮಾವುತರಾದ ಶ್ರೀನಿವಾಸ್, ಗುರುಪ್ರಸಾದ್, ಶಿವಪ್ರಸಾದ್, ದೇಗುಲದ ಸಿಬಂದಿ ಸುಬ್ಬಣ್ಣ ಉಪಸ್ಥಿತರಿದ್ದರು.
ಪ್ರಶಾಂತ ವಾತಾವರಣದಲ್ಲಿ ಮನೆ
ಅರಣ್ಯದಂಚಿನ ಪ್ರಶಾಂತ ವಾತಾವರಣವಿರುವ ಸ್ಥಳದಲ್ಲಿ ಶೆಡ್ ನಿರ್ಮಿಸಲಾಗಿದೆ. ಎತ್ತರದ ಮೇಲ್ಛಾವಣಿ ಅಳವಡಿಸಿ ಶೆಡ್ ನಿರ್ಮಿಸಲಾಗಿದೆ. ಎರಡು ಸ್ತರದಲ್ಲಿ ಚಾವಣಿಗೆ ವಿನೂತನ ವಾತಾಯನ ವ್ಯವಸ್ಥೆ ಇದೆ. ಶಬ್ದ ಮಾಲಿನ್ಯ ಹೊಂದದ ಸಿಂಥೆಟಿಕ್ ಶೀಟ್ ಅಳವಡಿಸಲಾಗಿದೆ. ಮುಂದೆ ಆನೆಗೆ ಸ್ನಾನ ಮಾಡಲು ಶವರ್ ಬಾತ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಾಕಷ್ಟು ನೀರು ಆನೆಗೆ ಸಿಗಲು ನೀರು ಸರಬರಾಜು ಪೈಪು ಅಳವಡಿಸಲಾಗುತ್ತಿದೆ. ಮಾವುತರಿಗೆ ತಂಗಲು ಮನೆ, ಬಾವಿ ಮುಂತಾದ ವ್ಯವಸ್ಥೆಗಳನ್ನು ಇಲ್ಲಿಗೆ ಹಂತಹಂತವಾಗಿ ಒದಗಿಸಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.