ಸುಬ್ರಹ್ಮಣ್ಯ: ಆಶ್ಲೇಷ ನಕ್ಷತ್ರ ದಿನವಾದ ರವಿವಾರ ನಾಗರಾಧನೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾರಿ ಪ್ರಮಾಣದ ಭಕ್ತರು ಕಂಡುಬಂದರು. ಸರಕಾರಿ ರಜೆ ಹಾಗೂ ಶಾಲೆಗಳಿಗೆ ವಾರ್ಷಿಕ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.
ಶನಿವಾರ ಸಂಜೆಯಿಂದಲೇ ನಾಡಿನ ವಿವಿಧೆಡೆಯಿಂದ ಭಕ್ತರು ಕ್ಷೇತ್ರದ ಕಡೆಗೆ ಆಗಮಿಸಿದ್ದರು. ದೇವಸ್ಥಾನದ ವಸತಿಗ್ರಹ, ಛತ್ರ ಹಾಗೂ ವಸತಿಗೃಹಗಳಲ್ಲಿ ರಾತ್ರಿ ತಂಗಿದರು. ಉಳಿದುಕೊಳ್ಳಲು ವಸತಿ ಸಿಗದೆ ಹಲವರು ತೊಂದರೆ ಅನುಭವಿಸಿದರು. ರವಿವಾರ ಬೆಳಗ್ಗೆ ಅಧಿಕ ಮಂದಿ ಭಕ್ತರು ದೇವರ ದರ್ಶನ ಹಾಗೂ ಸೇವೆಗಳಲ್ಲಿ ತೊಡಗಿಸಿಕೊಂಡರು.
ರವಿವಾರ ಕುಕ್ಕೆನಾಥನ ದರ್ಶನಕ್ಕಾಗಿ ಭಕ್ತ ಸಾಗರವೇ ಕ್ಷೇತ್ರದಲ್ಲಿತ್ತು. ಪ್ರಮುಖ ಸೇವಗಳಾದ ತುಲಾಭಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆ, ಶೇಷ ಸೇವೆ ಇತ್ಯಾದಿಗಳನ್ನು ಪೂರೈಸಿಕೊಂಡರು. ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕಗಳೂ ಅಧಿ ಕ ಸಂಖ್ಯೆಯಲ್ಲಿ ನೆರವೇರಿವೆ.
ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ ಮೊದಲಾದ ಕಡೆಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಸೇವಾ ರಶೀದಿ ಇತ್ಯಾದಿಗಳನ್ನು ನೆರವೇರಿಸಿಕೊಂಡರು. ಯಾತ್ರಿಗಳನ್ನು ನಿಯಂತ್ರಿಸಲು ಪೊಲೀಸರು, ಗೃಹರಕ್ಷಕ ಸಿಬಂದಿ, ದೇಗುಲದ ಸಿಬಂದಿ ಬಹಳ ಕಷ್ಟಪಟ್ಟರು. ಸ್ಥಳೀಯರು ಸ್ವಯಂಸೇವಕರಾಗಿ ಸಹಕರಿಸಿದರು.
ವಾಹನಗಳೂ ಹೆಚ್ಚಿದ್ದವು. ಅಕ್ಷರಾ ವಸತಿಗೃಹದ ಹಿಂಭಾಗದಲ್ಲಿನ ಪಾರ್ಕಿಂಗ್ ಸ್ಥಳ ಮತ್ತು ಬಿಲದ್ವಾರದ ಬಳಿ, ಸವಾರಿ ಮಂಟಪದ ಬಳಿಯಲ್ಲಿ ಪಾರ್ಕಿಂಗ್ ಸ್ಥಳಗಳು ತುಂಬಿದ್ದವು. ಶಾಲಾ ಕಾಲೇಜುಗಳ ಆಟದ ಮೈದಾನಗಳಲ್ಲೂ ವಾಹನಗಳನ್ನು ನಿಲ್ಲಿಸಲಾಗಿತ್ತು. ಕುಮಾರಧಾರಾದಿಂದ ಪೇಟೆ ತನಕದ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಆಯಿತು. ಸುಳ್ಯ ರಸ್ತೆಯ ಇಂಜಾಡಿ ತನಕವೂ ವಾಹನಗಳ ಸಾಲು ಇತ್ತು. ಬಿಸಿಲು ಹೆಚ್ಚಿದ್ದರಿಂದ ಭಕ್ತರು ಪ್ರಯಾಸಪಟ್ಟರು.