Advertisement

ಕುಕ್ಕೆ: ‘ಪರಿಸರ ಸ್ನೇಹಿ ಟೂರಿಸಂ’ ಯೋಜನೆಗೆ ಅರಣ್ಯ ಸಚಿವರ ಸೂಚನೆ

11:52 PM Feb 05, 2024 | Team Udayavani |

ಸುಬ್ರಹ್ಮಣ್ಯ: ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಅರಣ್ಯ ಇಲಾಖೆಯ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳ ಜತೆ ಚರ್ಚಿಸಿದರು.

Advertisement

ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರ ಧಾರದ ಸಾಲುಮರದ ತಿಮ್ಮಕ್ಕ ಉದ್ಯಾನ ವನಕ್ಕೆ ಭೇಟಿ ನೀಡಿದ ಸಚಿವರಿಗೆ ಅರಣ್ಯ ಇಲಾಖೆ ವತಿಯಿಂದ ಅರಣ್ಯಕ್ಕೆ ಬೀಳುವ ಬೆಂಕಿ ನಂದಿಸುವ ಬಗೆಗಿನ ಮುಂಜಾಗ್ರತಾ ಕ್ರಮ ಹಾಗೂ ಬೆಂಕಿ ನಂದಿಸಲು ಕೈಗೊಂಡ ಕ್ರಮ ಹಾಗೂ ಬೆಂಕಿ ನಂದಿಸುವ ಬಗೆಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಬಳಿಕ ಅಗ್ನಿಶಾಮಕ ದಳದ ವತಿಯಿಂದಲೂ ಬೆಂಕಿ ನಂದಿಸುವ ಬಗೆಗೆ ವಿವಿಧ ಮಾದರಿಯ ಕಾರ್ಯಾಚರಣೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಕುಮಾರಪರ್ವತ ಚೆಕ್‌ ಪಾಯಿಂಟ್‌ಗೆ ಭೇಟಿ
ಸುಬ್ರಹ್ಮಣ್ಯ ಸಮೀಪದ ದೇವರಗದ್ದೆಯ ಕುಮಾರಪರ್ವತ ಪ್ರವೇಶ ದ್ವಾರದ ಅರಣ್ಯ ಚೆಕ್‌ ಪೋಸ್ಟ… ಗೆ ಭೇಟಿ ನೀಡಿದರು. ಅಲ್ಲಿ ಕೆಲ ದಿನಗಳ ಹಿಂದೆ ಚಾರಣಕ್ಕೆ ಸಂಬಂಧಿಸಿದಂತೆ ಉಂಟಾದ ದಟ್ಟನೆ ಬಗ್ಗೆ ಮಾಹಿತಿ ಪಡೆದು ಕಾರಣಗಳನ್ನು ಅಧಿಕಾರಿಗಳಿಂದ ಪಡೆದರು. ಬಳಿಕ ಚೆಕ್‌ ಪೋಸ್ಟ್‌ ಹಾಗೂ ಪರಿಸರವನ್ನು ಸಚಿವರು ಪರಿಶೀಲಿಸಿ ಮಾಹಿತಿ ಪಡೆದರು.

ಪರಿಸರ ಸ್ನೇಹಿ ಚಾರಣಕ್ಕೆ ಆದ್ಯತೆ ನೀಡಲು ಕುಮಾರಪರ್ವತ ಸೇರಿದಂತೆ ಚಾರಣ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲು ಅಧಿಕಾರಿ ಗಳಿಗೆ ನಿರ್ದೇಶಿಸಿದರು. ಮುಂದಿನ ಅವಧಿಯಿಂದ ಕುಮಾರಪರ್ವತ ಚಾರಣ ಕೈಗೊಳ್ಳಲು ಸಂಪೂರ್ಣ ಆನ್‌ಲೈನ್‌ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಚಾರಣ ಸಂದರ್ಭ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಗಮನ ಹರಿಸಬೇಕು. ಈ ಬಗ್ಗೆ ಸಿಬಂದಿಯಿಂದ ವರದಿ ಪಡೆಯಬೇಕು. ಚಾರಣಕ್ಕೆ ದಟ್ಟಣೆ ಉಂಟಾಗದ ರೀತಿಯಲ್ಲಿ ನಿಗಧಿತ ಸಂಖ್ಯೆಗೆ ಸೀಮಿತಗೊಳಿಸಲು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು. ಬಳಿಕ ಅಲ್ಲಿನ ಸಿಬಂದಿಯಿಂದ ಅಹವಾಲು ಪಡೆದರು. ಅರಣ್ಯ ಇಲಾಖೆಯ ಸಿಸಿಎಫ್‌ ಕರಿಕಾಲನ್‌, ಡಿಸಿಎಫ್‌ ಅಂತೋಣಿ ಮರಿಯಪ್ಪ, ಎಸಿಎಫ್‌ ಪ್ರವೀಣ್‌ ಕುಮಾರ್‌ ಶೆಟ್ಟಿ, ವಲಯ ಅರಣ್ಯಾಧಿಕಾಗಳಾದ ವಿಮಲ್‌ ಬಾಬು, ಮಂಜುನಾಥ್‌, ಗಿರೀಶ್‌, ಪ್ರಮುಖರಾದ ಜಿ. ಕೃಷ್ಣಪ್ಪ, ರಕ್ಷಿತ್‌ ಶಿವರಾಂ, ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮತ್ತಿತರರಿದ್ದರು.

ಅರಣ್ಯ, ಕಂದಾಯದಿಂದ ಡೀಮ್ಡ್ ಫಾರೆಸ್ಟ್‌ ಸರ್ವೇ : ಧರ್ಮಸ್ಥಳದಲ್ಲಿ ಈಶ್ವರ್‌ ಖಂಡ್ರೆ ಹೇಳಿಕೆ
ಬೆಳ್ತಂಗಡಿ: ಡೀಮ್ಡ್ ಫಾರೆಸ್ಟ್‌ ಸಮಸ್ಯೆಗೆ ಪರಿಹಾರ ಕಾಣಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. ಡೀಮ್ಡ್ ಅರಣ್ಯ 1 ಮತ್ತು ಡೀಮ್ಡ್ ಅರಣ್ಯ 2 ಎಂಬ ವಿಭಾಗಗಳಿದ್ದು, 1ನ್ನು ಬಿಡಲು ಸಾಧ್ಯವಿಲ್ಲ. 2ನೇ ವಿಭಾಗದಲ್ಲಿ ಜನವಸತಿ, ಶಾಲೆ ಇದ್ದಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಿ ಗಡಿ ಗುರುತಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡ ಲಾಗುವುದು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಧರ್ಮಸ್ಥಳದಲ್ಲಿ ಸೋಮವಾರ ಮಾಧ್ಯಮದೊಂ ದಿಗೆ ಮಾತನಾಡಿದ ಅವರು, ಅರಣ್ಯದಲ್ಲಿ ಜನವಸತಿ ಪ್ರದೇಶ ಕಂಡುಬಂದರೆ ಸುಪ್ರೀಂಕೋರ್ಟ್‌ ಗಮನಕ್ಕೆ ತಂದು ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಒದಗಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಕೃಷಿಗೆ ಕಾಡಾನೆಗಳ ಉಪಟಳದ ಬಗ್ಗೆ ಗಮನ ಸೆಳೆದಾಗ, ಮಲೆನಾಡು ಸಹಿತ ಎಲ್ಲೆಡೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು ಈ ಬಗ್ಗೆಯೂ ಅರಣ್ಯ ಇಲಾಖೆ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next