Advertisement

ಸಂತೆ ವ್ಯಾಪಾರಕ್ಕೆ ತೆರೆದುಕೊಳ್ಳುತ್ತಿದೆ ಕುಕ್ಕೆ ಜಾತ್ರೆ

10:33 AM Dec 12, 2018 | |

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಧಾರ್ಮಿಕ ವೈಶಿಷ್ಟ್ಯ ಗಳಿಗಷ್ಟೆ ಸೀಮಿತವಾಗಿಲ್ಲ. ವ್ಯಾಪಾರ ವಹಿವಾಟು ಕೂಡ ಇಲ್ಲಿ ಜೋರಾಗಿಯೇ ನಡೆಯುತ್ತದೆ. ಜಾತ್ರೆಗಾಗಿ ಇಲ್ಲಿನ ಶಾಲಾ ಮೈದಾನದಲ್ಲಿ ವ್ಯಾಪಾರ ಮಳಿಗೆಗಳು ತೆರೆದುಕೊಂಡು ಸಹಸ್ರಾರು ಮಂದಿಯನ್ನು ಆಕರ್ಷಿಸುತ್ತಿವೆ.

Advertisement

ಡಿ. 6ರಂದು ಕ್ಷೇತ್ರದಲ್ಲಿ ನಡೆದ ಲಕ್ಷ ದೀಪೋತ್ಸವದ ಅನಂತರದಲ್ಲಿ ವ್ಯಾಪಾರ ಮಳಿಗೆಗಳು ಇಲ್ಲಿ ತೆರೆದಿವೆ. ಧರ್ಮಸ್ಥಳದ ಲಕ್ಷ ದೀಪೋತ್ಸವ ಮುಗಿದ ಬಳಿಕ ಅಲ್ಲಿಂದ ವ್ಯಾಪಾರಿಗಳು ಕುಕ್ಕೆಗೆ ಆಗಮಿಸಿದ್ದಾರೆ. ಇಲ್ಲಿಯೂ ವ್ಯಾಪಾರ ಆರಂಭಿಸುತ್ತಾರೆ. ಹಿಂದಿನಿಂದಲೂ ಇದು ಹೀಗೆಯೇ ನಡೆದು ಬಂದಿದೆ.

ಚಂಪಾ ಷಷ್ಠಿ ವೇಳೆ ತಾತ್ಕಾಲಿಕ ಅಂಗಡಿ ತೆರೆಯಲು ಇಲ್ಲಿನ ಶಾಲಾ ಮೈದಾನದಲ್ಲಿ ಪಂಚಾಯತ್‌ ಮತ್ತು ದೇವಸ್ಥಾನ ಸ್ಥಳ ಗುರುತಿಸಿ ಏಲಂ ಮೂಲಕ ಹಂಚಲಾಗಿದೆ. ಮಣಿ ಸರಕು, ಕಂಬಳಿ, ಗೃಹ ಬಳಕೆಯ ಸಾಮಗ್ರಿಗಳು ಹಾಗೂ ಪಾದರಕ್ಷೆಗಳ ವ್ಯಾಪಾರ ಶುರುವಾಗಿದೆ. ಚುರುಂಬುರಿ, ಜ್ಯೂಸ್‌, ಗೋಬಿ ಮಂಚೂರಿ, ಬೇಲ್‌ಪುರಿಯಂತಹ ಚಾಟ್ಸ್‌, ಕಬ್ಬಿನಹಾಲು, ಐಸ್‌ಕ್ರೀಂ ಇತ್ಯಾದಿ ಮಳಿಗೆಗಳು ವ್ಯಾಪಾರ ಆರಂಭಿಸಿವೆ. ರಸ್ತೆ ಬದಿಯಲ್ಲೂ ವ್ಯಾಪಾರ ಜೋರಾಗಿದೆ.

ಮನರಂಜನೆ ಸರಕು
ಕ್ಷೇತ್ರದಲ್ಲಿ 200ಕ್ಕೂ ಅಧಿಕ ಅಂಗಡಿ ಮಳಿಗೆಗಳು, ಮನರಂಜನ ವ್ಯವಸ್ಥೆಗಳು ತೆರೆದುಕೊಂಡಿವೆ. ಮಕ್ಕಳ ಮನರಂಜನೆಯ ಜಾಯಿಂಟ್‌ ವೀಲ್‌, ಪುಟಾಣಿ ರೈಲು, ಟೊರೆಂಟೊರೋ, ಚುಕುಬುಕ್‌ ರೈಲು, ಪ್ರಾಣಿಗಳ ಮೇಲೆ ಸವಾರಿ ಮೊದಲಾದ ವ್ಯವಸ್ಥೆಗಳು ಸಿದ್ಧಗೊಳ್ಳುತ್ತಿವೆ. ಮಕ್ಕಳ ಆಟಿಕೆಯ ಸಾಮಾನುಗಳಾದ ಪೀಪಿ, ಬಲೂನ್‌, ವಾಲಗ ಇತ್ಯಾದಿಗಳಿದ್ದರೆ, ವಾದ್ಯಗಳನ್ನು ನುಡಿಸುತ್ತ, ಶಂಖ ಊದಿ ಜಾಗಟೆ ಬಾರಿಸುತ್ತ ಹೊಟ್ಟೆಪಾಡಿಗೆ ದಾರಿ ಮಾಡಿಕೊಂಡವರೂ ಇದ್ದಾರೆ. ವ್ಯಾಪಾರಿಗಳು ಜನರನ್ನು ಕೂಗಿ ಕರೆದು ತಮ್ಮಲ್ಲಿರುವ ವಸ್ತುಗಳನ್ನು ಕೊಳ್ಳುವಂತೆ ಪ್ರೇರಣೆ ನೀಡುತ್ತಿದ್ದಾರೆ. ಇವೆಲ್ಲ ಸೇರಿ ಜಾತ್ರೆಯ ಸೊಬಗಿಗೆ ಮತ್ತಷ್ಟೂ ರಂಗು ತುಂಬುತ್ತಿವೆ. ಪಂಚಮಿ, ಷಷ್ಠಿ ಹಾಗೂ ಅವಭೃಥ ದಿನಗಳಲ್ಲಿ ಭರ್ಜರಿ ವ್ಯಾಪಾರ ನಡೆದು ಮುಂದಿನ ಕಿರು ಷಷ್ಠಿ ತನಕವೂ ವ್ಯಾಪಾರ ಇಲ್ಲಿ ಜೋರಾಗಿಯೇ ಇರುತ್ತವೆ. 

ದೀಪಾಲಂಕಾರ ಆಕರ್ಷಣೆ
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಪ್ರಯುಕ್ತ ನಗರ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡು ಶೋಭಿಸುತ್ತಿದೆ. ದೇವಸ್ಥಾನದ ಮಹಾದ್ವಾರ. ಒಳಾಂಗಣ, ಹೊರಾಂಗಣ ಮೊದಲಾದ ಕಡೆಗಳಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡು ಸಹಸ್ರಾರು ಮಂದಿಯನ್ನು ಆಕರ್ಷಿಸುತ್ತದೆ. ನಗರದ ಅಂಗಡಿಮುಂಗಟ್ಟುಗಳು ಕೂಡ ಅಲಂಕಾರಗೊಂಡಿವೆ.

Advertisement

ಅಜಗಜಾಂತರ
ಹತ್ತು ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ಅಂದಿನ ಜಾತ್ರೆಗೂ ಇಂದಿಗೂ ಅಜಗಜಾಂತರವಿದೆ. ಹಿಂದಿನಷ್ಟು ವ್ಯಾಪಾರವೂ ಈಗಿಲ್ಲ. ಆಯ್ಕೆಗಳು ಜಾಸ್ತಿಯಾಗಿದ್ದರಿಂದ ವ್ಯಾಪಾರ ಕಡಿಮೆಯಾಗುತ್ತಿದೆ.
 - ಬಸವಮ್ಮ ಹುಣಸೂರು,
    ಮಣಿಸರಕಿನ ವ್ಯಾಪಾರಸ್ಥೆ  

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next