ಕುಕನೂರು: ತಲೆಮಾರುಗಳಿಂದ ಶವ ಸಂಸ್ಕಾರಕ್ಕೆ ಬಳಸುತ್ತಿದ್ದ ರುದ್ರಭೂಮಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದನ್ನು ಮರಳಿ ನೀಡದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ದ್ಯಾಂಪೂರು ಗ್ರಾಮಸ್ಥರು ತಹಶೀಲ್ದಾರ್ ನೀಲಪ್ರಭಾ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಸಿದರು.
ದ್ಯಾಂಪೂರು ಗ್ರಾಮದ ಸರ್ವೇ ನಂ.225ರ ಜಮೀನಿನಲ್ಲಿ ತಲೆ ತಲಾಂತರದಿಂದ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಸದ್ಯ ಈ ಭೂಮಿಯನ್ನು ರುದ್ರಭೂಮಿಗೆ ಭೂಸ್ವಾ ಧೀನ ಮಾಡಬೇಕು ಹಾಗೂ ಕೂಡಲೇ ಪಹಣಿ 11ನೇ ಕಲಂನಲ್ಲಿ ರುದ್ರಭೂಮಿಗೆ ಭೂಸ್ವಾ ಧೀನ ಎಂದು ನಮೂದು ಮಾಡಬೇಕು ಎಂದು ಆಗ್ರಹಿಸಿದರು.
ಭೂ ಮಾಲೀಕರು ಬೇರೆಯವರಿಗೆ ಭೂಮಿ ಮಾರಾಟ ಮಾಡಿದ್ದಾರೆ. ಖಾತಾ ಬದಲಾವಣೆ ಸಂದರ್ಭದಲ್ಲಿ ಗ್ರಾಮಸ್ಥರಿಂದ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ತಾಲೂಕು ದಂಡಾಧಿಕಾರಿಗಳು ಮೂರು ಬಾರಿ ಮುದ್ದತ್ ನಿಗದಿಪಡಿಸಿ ವಿಚಾರಣೆ ನಡೆಸಿದ್ದಾರೆ. ಕೊನೆ ವಿಚಾರಣೆಗೆ ಮೊದಲು ದಂಡಾಧಿಕಾರಿಗಳು ಸರ್ವೇ ನಂ.225ಕ್ಕೆ ಸ್ವತಃ ಭೇಟಿ ಮಾಡಿ ಸ್ಥಿತಿಗತಿ ಅವಲೋಕಿಸಿ ಸ್ಮಶಾನ ಇರುವುದು ಸತ್ಯವೆಂದು ಮನಗಂಡಿದ್ದಾರೆ.
ಪಹಣಿ ಕಲಂ ನಂ.11ರಲ್ಲಿ ಸ್ಮಶಾನಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಚಾಲು ಇರುವುದೆಂದು ಕಾಣಿಸಿ ತೀರ್ಪು ಕೊಡುವುದಾಗಿ ಜನರ ಮುಂದೆ ತಿಳಿಸಿದ್ದರಿಂದ ಸಾರ್ವಜನಿಕರು ಒಪ್ಪಿದ್ದರು. ಈ ಪ್ರಕಾರ ಸರ್ವೇ ನಂ.225ರ ಪಹಣಿ ಕಾಲಂ ನಂ 11ರಲ್ಲಿ ಸ್ಮಶಾನಕ್ಕಾಗಿ ಭೂ ಸ್ವಾ ಧೀನ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ನಮೂದಿಸಬೇಕು ಎಂದು ತಿಳಿಸಿದ್ದು, ಆ ಪ್ರಕ್ರಿಯೆ ಇನ್ನೂ ಆಗಿಲ್ಲ. ಆದ್ದರಿಂದ ಸಮಸ್ಯೆ ಬಗೆಹರಿಸದಿದ್ದರೆ ವಿಧಾನಸಭೆ ಚುನಾವಣೆ ಗ್ರಾಮಸ್ಥರೆಲ್ಲರೂ ಬಹಿಷ್ಕರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಕುಕನೂರು ಪಪಂ ಸದಸ್ಯ ಗಗನ ನೋಟಗಾರ ಮಾತನಾಡಿ, ದ್ಯಾಂಪೂರು ಗ್ರಾಮದ ರುದ್ರಭೂಮಿ ಕುಕನೂರಿನ ಮೂರ್‍ನಾಲ್ಕು ವಾರ್ಡಿನ ಜನರು ಸಹ ಅಂತ್ಯಸಂಸ್ಕಾರಕ್ಕೆ ತೆರಳುತ್ತಾರೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಭೂಸ್ವಾಧೀನ ಮಾಡಿ ರುದ್ರಭೂಮಿ ಒದಗಿಸಿಸುವಂತೆ ಮನವಿ ಮಾಡಿದರು. ತಹಶೀಲ್ದಾರ್ ನೀಲಪ್ರಭಾಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿ, ಈಗಾಗಲೇ ರುದ್ರಭೂಮಿಗೆ ಆ ಜಮೀನಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಈ ವೇಳೆ ಗ್ರಾಪಂ ಸದಸ್ಯರಾದ ಮುದಿಯಪ್ಪ ಬೀಡಿನಾಳ, ಬಸವರೆಡ್ಡಿ ಬೀಡಿನಾಳ, ಪ್ರೇಮರಾಜ ಮಾಲಗಿತ್ತಿ, ದೇವಪ್ಪ ಮರಡಿ, ಬಸವರಾಜ ಮಾಸೂರು, ಸಂಗಪ್ಪ ನೋಟಗಾರ, ಹನುಮಪ್ಪ ಸದರಿ, ಸುರೇಶ ಆರೇರ, ಯಲ್ಲಪ್ಪ ನೋಟಗಾರ, ಮಂಜುನಾಥ ಮರಡಿ, ಭೀಮರೆಡ್ಡಿ ಬೀಡಿನಾಳ, ವಿಜಯರೆಡ್ಡಿ ಬೀಡಿನಾಳ, ಹನುಮಪ್ಪ ನೋಟಗಾರ, ಹೊನ್ನಪ್ಪ ಮರಡಿ, ಲಕ್ಷ್ಮಣ ಆರೇರ ಇತರರಿದ್ದರು.