ಪ್ರಸಿದ್ಧ ಹಾಸ್ಯ ಸಾಹಿತಿ ಕು.ಗೋ. ಅವರು ಕನ್ನಡ ನಾಡಿನಲ್ಲಿರುವ ಸಾಹಿತ್ಯಾಸಕ್ತರಿಗೆ ಪುಸ್ತಕಗಳನ್ನು ಹಂಚುವ ಅವರ ಕಾಯಕದಿಂದಾಗಿ ಪುಸ್ತಕ ಪರಿವ್ರಾಜಕರೆಂದೇ ಜನಪ್ರಿಯರಾದವರು. ತಮ್ಮ ದೈನಂದಿನ ಜೀವನಾನುಭವಗಳಿಗೆ ಹಾಸ್ಯವನ್ನು ಲೇಪಿಸಿ ಲೇಖನಗಳನ್ನಾಗಿಸುವ ಅವರ ಅದ್ಭುತ ಪ್ರತಿಭೆಯು ಅವರ ಈ ಹಿಂದಿನ ಕೃತಿಗಳಲ್ಲಿಯಂತೆ ಇತ್ತೀಚೆಗೆ ಎರಡನೆಯ ಮುದ್ರಣ ಕಂಡ ಅವರ ‘ಇನ್ನೂ ಒಂದಿಷ್ಟು’ಎಂಬ ಹಾಸ್ಯ ಲೇಖನಗಳ ಸಂಕಲನದಲ್ಲೂ ಅನಾವರಣಗೊಂಡಿದೆ.
ಇದನ್ನೂ ಓದಿ : ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!
ಈ ಸಂಕಲನದಲ್ಲಿ ಹಾಸ್ಯದ ವಿವಿಧ ಮುಖಗಳನ್ನು ತೋರಿಸುವ 49 ಲೇಖನಗಳಿವೆ. ಇಲ್ಲಿರುವುದು ಏಕರೂಪದ ಹಾಸ್ಯವಲ್ಲ. ಕೆಲವು ಲೇಖನಗಳಲ್ಲಿ ನವಿರಾದ ವ್ಯಂಗ್ಯವಿದ್ದರೆ (ಉದಾ: ಪ್ರಯಾಣಿಕರಿಗೆ ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ಕಂಡಕ್ಟರುಗಳ ಜಾಣ ಮರೆವು, ದುರಭ್ಯಾಸಗಳನ್ನು ಬಿಡುವಲ್ಲಿ ಸಹಾಯಕವಾಗುವ ‘ಮರೆವು’ ಎಂಬ ವರದಾನ, ತಮಗಿಂತ ಹೆಚ್ಚಿನ ಬುದ್ಧಿವಂತರೇ ಇಲ್ಲವೆಂದು ಅಹಂಕಾರದಿಂದ ಬೀಗುತ್ತಿದ್ದ. ಗುರುಗುಂಟಿರಾಯರು ಲೇಖಕರ ಹಾಸ್ಯಪುಸ್ತಕ ಚಿಕಿತ್ಸೆಯ ಮೂಲಕ ಮನುಷ್ಯನಾದದ್ದು, ಚಿನ್ನದಂಗಡಿಯ ದೊಡ್ಡ ಮನುಷ್ಯರನ್ನೂ ಲೇಖಕರು ಪುಸ್ತಕ ಪ್ರೀತಿಗೆ ಮಣಿಸಿದ್ದು, ಪ್ರಶಸ್ತಿ ವಾಪಸಿ ನಾಟಕ ), ಇನ್ನು ಕೆಲವು ಲೇಖನಗಳಲ್ಲಿ ತಮ್ಮನ್ನೇ ಹಾಸ್ಯಕ್ಕೆ ಗುರಿ ಮಾಡಿ ಓದುಗರನ್ನು ಲಘುವಾಗಿ ನಗಿಸುವ ಸಂದರ್ಭಗಳಿವೆ (ಮೇಲೆ ಹೋಗಿದ್ದಾರೆ ಎನ್ನುವ ಲೇಖನ, ತನಗೆ ಸಿಕ್ಕುವ ಸಂಬಳದ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಳ್ಳುವುದು, ಗುಜರಿಯವನ ಸುಳ್ಳನ್ನು ನಂಬಿ ಲೇಖಕರು ಬೇಸ್ತು ಬೀಳುವುದು, ಹೋಟೆಲ್ ಸಪ್ಪೈಯರನ ಜತೆಗೆ ಸಂಭಾಷಣೆ, ಪತ್ರಿಕೆಯಲ್ಲಿ ಭವಿಷ್ಯ, ಅಷ್ಟಾವಧಾನದಲ್ಲಿ ಕೇಳುವ ಅಧಿಕ ಪ್ರಸಂಗದ ಪ್ರಶ್ನೆಗಳು ಇತ್ಯಾದಿ). ಇನ್ನು ಕೆಲವು ಲೇಖನಗಳಲ್ಲಿ ಹಾಸ್ಯದೊಂದಿಗೆ ವಿಷಾದವೂ ಸೇರಿಕೊಂಡಿದೆ ( ಮಹಿಳಾ ಸಾಹಿತಿಯ ಮನೆಗೆ ಹೋದಾಗ ಆಕೆಯ ಬಿಡುವೇ ಇಲ್ಲದ ವ್ಯಸ್ತತೆಯನ್ನು ನೋಡಿ ಇಂಥವರು ಬರೆಯಲು ಎಷ್ಟು ಕಷ್ಟ ಪಡುತ್ತಾರೋ ಎಂದು ಲೇಖಕರು ಸಹಾನುಭೂತಿ ವ್ಯಕ್ತ ಪಡಿಸುವುದು, ಬೀದಿ ಬದಿ ಮಾರಾಟಗಾರರ ಸಂಕಷ್ಟಗಳ ಚಿತ್ರಣ,(ಕಿಣಿ ಕಿಣಿ ಸದ್ದು) ಇತ್ಯಾದಿ.
ಪರಿಸರ ಜಾಗೃತಿ(ನೀರುಳಿಸಿರಿ!), ಊಟದ ಶಿಸ್ತು,(ಊಟ), ಮನುಷ್ಯ ಸಂಬಂಧಗಳಲ್ಲಿನಂಬುಗೆಯ ಪ್ರಾಮುಖ್ಯವನ್ನು ವಿವರಿಸುತ್ತ ಅಮ್ಮನ ಗುಣದ ನೆನಪು(ಮನುಷ್ಯರನ್ನು ನಂಬಬಹುದು), ನುಡಿಸಿರಿಯ ವೈಭವದ ನೆಪದಲ್ಲಿ ಆಳ್ವರ ಕಲಾಪ್ರಿಯತೆಯ ಚಿತ್ರಣ(ನುಡಿಸಿರಿಗೆ ಹೋಗಿದ್ದೀರಾ ?) ಇತ್ಯಾದಿ ಹೃದಯಸ್ಪರ್ಶಿ ಲೇಖನಗಳೂ ಇಲ್ಲಿವೆ.
ವ್ಯಂಗ್ಯವಾಗಲಿ ವಿಷಾದವಾಗಲಿ, ಅಥವಾ ಹಾಸ್ಯದ ಧ್ವನಿ ಯಾವುದೇ ಇರಲಿ ಇಲ್ಲಿನ ಎಲ್ಲಾ ಲೇಖನಗಳಲ್ಲಿ ಕು.ಗೋ.ಅವರ ತಿಳಿಹಾಸ್ಯವು ಓದುಗರನ್ನು ಹೆಜ್ಜೆ ಹೆಜ್ಜೆಗೂ ಖುಷಿಯಿಂದ ನಗುವಂತೆ ಮಾಡುತ್ತದೆ. ಲೇಖಕರ ಭಾಷಾ ಶೈಲಿ ತುಂಬಾ ಸುಂದರವಾಗಿದೆ.
ಕೃತಿಯ ಆರಂಭದಲ್ಲಿ ಹಾಸ್ಯ ಸಾಹಿತ್ಯದ ಇಂದಿನ ಸ್ಥಿತಿಗತಿಗಳ ಬಗೆಗಿನ ಲೇಖನವು ವಿದ್ವತ್ಪೂರ್ಣವಾಗಿದ್ದು ಓದುಗರನ್ನು ಚಿಂತನೆಗೆ ಹಚ್ಚುತ್ತದೆ.
-ಪಾರ್ವತಿ ಜಿ.ಐತಾಳ್
ಹಿರಿಯ ಸಾಹಿತಿಗಳು, ಅನುವಾದಕರು
————————————————
ಕೃತಿಯ ಹೆಸರು: ಇನ್ನೂ ಒಂದಿಷ್ಟು
ಲೇಖಕರು : ಕು.ಗೋ.
ಪ್ರ : ತೇಜು ಪಬ್ಲಿಕೇಷನ್ಸ್
(ಕು.ಗೋ.)
ಇದನ್ನೂ ಓದಿ : ಆಧಾರ್ ಹಾಗೂ ಪಾನ್ ಕಾರ್ಡ್ ಗಳ ಜೋಡಣೆ ಗಡುವು ವಿಸ್ತರಿಸಿದ ಕೇಂದ್ರ..!