Advertisement

ಮಹಿಳೆಯರ ಸ್ವಾವಲಂಬಿ ಬದುಕಿಗೆ ಕುಟುಂಬಶ್ರೀ ಘಟಕಗಳು : ಕೆ.ಎನ್‌.ಕೃಷ್ಣ ಭಟ್‌

05:12 PM Jul 05, 2019 | keerthan |

ಬದಿಯಡ್ಕ: ಮಹಿಳೆಯರು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಕುಟುಂಬಶ್ರೀ ಮೂಲಕ ಸಾಧ್ಯವಾಗಿದೆ. ಇಂತಹ ಸಂಘಟನೆಗಳ ಮೂಲಕ ಮನೆಯೊಳಗಿನ ಮಹಿಳೆಯರು ಹೊರಲೋಕವನ್ನು ಕಾಣಲು ಮತ್ತು ಇತರರೊಂದಿಗೆ ಬೆರೆಯಲು ಸಹಕಾರಿಯಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯತ್‌ ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್‌ ಅಭಿಪ್ರಾಯಪಟ್ಟರು.

Advertisement

ಬದಿಯಡ್ಕ ಗ್ರಾಮಪಂಚಾಯತ್‌ ಸಿ.ಡಿ.ಎಸ್‌. ವಾರ್ಷಿಕೋತ್ಸವ ವೇದಿಕೆ-2019ನ್ನು ಬದಿಯಡ್ಕ ಗುರುಸದನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಕುಟುಂಬಶ್ರೀಯ ಘಟಕಗಳ ಮೂಲಕ ಹಲಸಿನ ಮೌಲ್ಯವರ್ಧನೆ ಸಾಧ್ಯವಾಗಲಿದೆ. ಸರಕಾರವು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದ್ದು, ಅದಕ್ಕಾಗಿ ಎಲ್ಲಾ ಸದಸ್ಯರೂ ಜೊತೆಗೂಡಬೇಕು. ಸರಕಾರದ ಯಾವುದೇ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಕುಟುಂಬಶ್ರೀ ಘಟಕಗಳು ಪ್ರಧಾನ ಕಾರಣವಾಗಿದೆ ಎಂದರು.

ಬದಿಯಡ್ಕ ಗ್ರಾ.ಪಂ. ಸಿಡಿಎಸ್‌ ಅಧ್ಯಕ್ಷೆ ಸುಧಾ ಜಯರಾಂ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್‌ ಓಸೋನ್‌ ಮಾತನಾಡುತ್ತಾ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಸರಕಾರವು ಕುಟುಂಬಶ್ರೀ ಘಟಕಗಳನ್ನು ಅನುಷ್ಠಾನಗೊಳಿಸಿ 21 ವರ್ಷಗಳಾಯಿತು. ಇಂದು ಅದು ಬಲಿಷ್ಠ ಸಂಘಟನೆಯಾಗಿ ಹೊರಹೊಮ್ಮಿ ಸರಕಾರ ಹಾಗೂ ಜನರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಮಾತನಾಡಿ ಕುಟುಂಬಶ್ರೀ ಕಾರ್ಯಕರ್ತೆಯರು ಅದೆಷ್ಟೋ ಮಂದಿ ಇಂದು ಜನಪ್ರತಿನಿಧಿಗಳಾಗಿ ನಮ್ಮ ಮುಂದಿದ್ದಾರೆ ಎಂದರು.

ಗ್ರಾ.ಪಂ. ಉಪಾಧ್ಯಕ್ಷೆ ಝೆ„ಬುನ್ನೀಸ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಬಾನ, ಗ್ರಾ.ಪಂ.ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಮುನೀರ್‌, ಜಯಶ್ರೀ, ರಾಜೇಶ್ವರಿ, ಜಯಂತಿ, ಪ್ರಸನ್ನ, ಲಕ್ಷ್ಮಿನಾರಾಯಣ ಪೈ, ವಿಶ್ವನಾಥ ಪ್ರಭು, ಮುಹಮ್ಮದ್‌, ಪುಷ್ಪ ಕುಮಾರಿ, ಪ್ರೇಮ ಕುಮಾರಿ, ಅನಿತ ಕ್ರಾಸ್ತ, ಕುಟುಂಬಶ್ರೀ ಸಂಚಾಲಕಿ ರಮ್ಯಾ, ಆರೋಗ್ಯ ಅಧಿಕಾರಿ ಪ್ರಕಾಶ್‌, ಸಹ ಅಧಿಕಾರಿ ದೇವಿಜಾಕ್ಷನ್‌, ಕೃಷಿಭವನದ ಅಧಿಕಾರಿ ಮೀರಾ, ಮೈರ್ಕಳ ನಾರಾಯಣ ಭಟ್‌, ಎಂ.ಎಚ್‌. ಜನಾರ್ಧನ, ಜಯಪ್ರಕಾಶ ಪಜಿಲ ಶುಭಹಾರೈಸಿದರು. ಕುಟುಂಬಶ್ರೀ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೀಪುಗಾರರಾಗಿ ರವಿಕಾಂತ ಕೇಸರಿ ಕಡಾರು, ನಿವೃತ್ತ ಅಧ್ಯಾಪಕ ಜನಾರ್ಧನ ಸಹಕರಿಸಿದರು. ಸುಮತಿ ವಿದ್ಯಾಗಿರಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಸರಸ್ವತಿ ಸ್ವಾಗತಿಸಿ, ಅನ್ನತ್‌ ವಂದಿಸಿದರು. ಲೀಲಾವತಿ ಕನಕಪ್ಪಾಡಿ ನಿರೂಪಿಸಿದರು.

ಕಾಸರಗೋಡಿನ ಕನ್ನಡ ಭಾಷೆಯ ಬೆಳವಣಿಗೆಗಳಿಗೆ ಇಂದು ಹೆಚ್ಚು ಆದ್ಯತೆ ನೀಡಬೇಕಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಮುತುವರ್ಜಿವಹಿಸಬೇಕಾದ ಜವಾಬ್ದಾರಿಯೂ ಇದೆ. ಬದಿಯಡ್ಕ ಗ್ರಾ.ಪಂ. ಬಹುಸಂಖ್ಯಾತ ಕನ್ನಡಿಗರೇ ಇರುವ ಪ್ರದೇಶ. ತಾನು ಈ ಹಿಂದೆ ಗ್ರಾ.ಪಂ. ಸದಸ್ಯನಾಗಿರುವಾಗ ವಿವಿಧ ಅರ್ಜಿ ಫಾರಂ ಗಳು ಕನ್ನಡದಲ್ಲೇ ಲಭ್ಯವಾಗಿಸುವಲ್ಲಿ ಕಾರ್ಯಪ್ರವೃತ್ತನಾಗಿದ್ದೆ. ಕನ್ನಡ ಭಾಷೆಯ ಫಲಕಗಳನ್ನೂ ಸಾಕಷ್ಟು ಬಳಸಿದ್ದೆ. ಆದರೆ ಇದೀಗ ಗ್ರಾ.ಪಂ.ನಲ್ಲಿ ಕನ್ನಡಿಗರಾಗಿರುವ ಅಧ್ಯಕ್ಷರು, ಸದಸ್ಯರುಗಳು ಇದ್ದೂ ಕನ್ನಡವನ್ನು ಅವಗಣಿಸುತ್ತಿರುವುದು ಖೇದಕರ. ಈ ಬಗ್ಗೆ ಕನ್ನಡ ಉಳಿಸಿ ಬೆಳೆಸಲು ಸಂಬಂಧಪಟ್ಟವರು ಅಗತ್ಯ ಕ್ರಮಗಳಿಗೆ ಮುಂದಾಗಬೇಕು.
ಮಂಜುನಾಥ ಡಿ.ಮಾನ್ಯ. ಮಾಜೀ. ಸದಸ್ಯ.ಬದಿಯಡ್ಕ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next