Advertisement

ಹೊಸಾಡು ಕಡುಬಿನ ಕೆರೆ ಪುನಶ್ಚೇತನಕ್ಕೆ ಬೇಡಿಕೆ : ಬರಡು ಭೂಮಿಯಂತಾದ 7.30 ಎಕರೆ ಪ್ರದೇಶದ ಕೆರೆ

11:23 PM Mar 09, 2021 | Team Udayavani |

ಮುಳ್ಳಿಕಟ್ಟೆ: ನೂರಾರು ಎಕರೆ ಕೃಷಿ ಭೂಮಿಗೆ ಒಂದು ಕಾಲದಲ್ಲಿ ವರದಾನವಾಗಿದ್ದ ವಿಶಾಲ ಕೆರೆಯೊಂದು ಅಭಿವೃದ್ಧಿಯಿಲ್ಲದೆ ಈಗ ಬರಡು ಭೂಮಿಯಂತಾಗಿದೆ. ಇದರಿಂದ 400 ಎಕರೆಗಳಿಗೂ ಅಧಿಕ ಕೃಷಿ ಭೂಮಿಗೆ ಸಮಸ್ಯೆಯಾಗುತ್ತಿದೆ. ಹೌದು ಕುಂದಾಪುರ ಭಾಗದ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾದ ಹೊಸಾಡು ಗ್ರಾಮದ ಕಡುಬಿನ ಕೆರೆ ಎರಡು ದಶಕಗಳಿಂದ ಪುನಶ್ಚೇತನಗೊಳ್ಳದೆ ಸೊರಗಿ ಹೋಗಿದೆ.

Advertisement

ಈ ಕಡುಬಿನ ಕೆರೆಯು ಸುಮಾರು 7.30 ಎಕರೆಗಳಷ್ಟು ವಿಸ್ತೀರ್ಣ ಹೊಂದಿದ್ದು, ಈಗ ನೀರು ಸಂಪೂರ್ಣ ಬತ್ತಿ ಹೋಗಿ, ಕೆರೆಯು ಬರಡು ಭೂಮಿಯಂತೆ ಕಾಣುತ್ತಿದೆ. ಈ ಬಾರಿಯಾದರೂ ಈ ಕೆರೆಯನ್ನು ಪುನಶ್ಚೇತನಗೊಳಿಸಬೇಕು ಎನ್ನುವುದು ಇಲ್ಲಿನ ಗ್ರಾಮಸ್ಥರ ಬೇಡಿಕೆಯಾಗಿದೆ.

400 ಎಕರೆ ಕೃಷಿ ಭೂಮಿ
ಹೊಸಾಡು ಗ್ರಾಮದ ಕೊಪ್ಪರಿಗೆ, ಕಮ್ಮಾರಕೊಡ್ಲು, ಮೂಗಿನಬೈಲು, ಕೋಟೆಮಕ್ಕಿ, ಮೈರ್‌ಮನೆ ಪ್ರದೇಶ ಸೇರಿದಂತೆ ಈ ಭಾಗದ ಸುಮಾರು 400 ಎಕರೆಗಳಿಗೂ ಅಧಿಕ ಗದ್ದೆ ಸಹಿತ ಕೃಷಿ ಭೂಮಿಗೆ ಈ ಕಡುಬಿನ ಕೆರೆಯ ನೀರೇ ಆಸರೆಯಾಗಿತ್ತು. ಕೆರೆಯ ನೀರಿನಾಶ್ರಯದ ಅಡಿಯಲ್ಲಿ ಈ ಪ್ರದೇಶದಲ್ಲಿ ಕಾಥಿ ಅನಂತರ ಸುಗ್ಗಿ ಬೆಳೆಯನ್ನು ಬೆಳೆಯುತ್ತಾ ಇದ್ದು, ಕೆರೆಯಲ್ಲಿ ಅಗಾಧ ಪ್ರಮಾಣದ ಹೂಳು ಮಣ್ಣು ತುಂಬಿಕೊಂಡಿದ್ದು, ಅವಧಿಗೆ ಮುನ್ನವೇ ಕೆರೆ ನೀರು ಬರಿದಾಗುತ್ತಿದ್ದುದರಿಂದ ರೈತರು ಭತ್ತದ ಕೃಷಿಯಿಂದಲೇ ವಿಮುಖವಾಗುವ ಪರಿಸ್ಥಿತಿ ಬಂದೊದಗಿದೆ.

ದಂಡೆ ದುರಸ್ತಿಗೆ ಆಗ್ರಹ
ವಿಶಾಲವಾದ ಈ ಕೆರೆ ದಂಡೆಯ ಮೇಲೆ ಮುಳ್ಳಿನ ಪೊದೆ, ಗಿಡಗಂಟೆ, ಬೃಹತ್‌ ಮರಗಳು ಬೆಳೆದುಕೊಂಡಿದ್ದು, ಕೆರೆ ದಂಡೆಯ ಮೇಲೆ ನಡೆದಾಡಲು ಸಾಧ್ಯವಿಲ್ಲ. ದಂಡೆಯ ಎರಡು ಬದಿಗಳ ಕಲ್ಲುಗಳು ಜಾರಿದ್ದು ಶಿಥಿಲಾವಸ್ಥೆ ಯಲ್ಲಿದ್ದು, ಇದನ್ನು ಅಭಿವೃದ್ಧಿಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೆರೆಯ ಹೂಳೆತ್ತಿ
ಕೆರೆಯ ನೀರನ್ನು ನಂಬಿಕೊಂಡು ರೈತರು ದಶಕಗಳ ಹಿಂದೆ ಮೂರು ಬೆಳೆಯನ್ನು ಬೆಳೆಯುತ್ತಿದ್ದರು. ಎಪ್ರಿಲ್‌ – ಮೇ ಕೊನೆಯವರೆಗೂ ನೀರು ತುಂಬಿಕೊಳ್ಳುತ್ತಿದ್ದ ಕೆರೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಫೆಬ್ರವರಿಯಲ್ಲೇ ಬರಡಾಗುತ್ತಿದೆ. ವಿಶಾಲವಾದ ಆಟದ ಮೈದಾನದಂತೆ ಗೋಚರಿಸುವ ಈ ಕೆರೆಯಲ್ಲಿ ಬೇಸಗೆಯಲ್ಲಿ ಕನಿಷ್ಠ ಹಕ್ಕಿಗಳಿಗೂ ಸಹ ಕುಡಿಯಲು ನೀರು ಸಿಗದ ಸ್ಥಿತಿಯಿದೆ. ಹೊಸಾಡು ಗ್ರಾ.ಪಂ.ನಿಂದ ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತುವ ಕಾರ್ಯ ನಡೆದರೂ, ಅದು ಯಾವುದೇ ಪ್ರಯೋಜನವಿಲ್ಲದಂತಾಗಿದೆ. ನೀರು ನಿಲ್ಲದೆ ಬಂಜರು ಭೂಮಿಯಂತೆ ಗೋಚರಿಸುವ ಈ ಕೆರೆಯನ್ನು ದೊಡ್ಡ ಮಟ್ಟದಲ್ಲಿ ಹೂಳೆತ್ತಿ ಅಭಿವೃದ್ಧಿಪಡಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.

Advertisement

ಪ್ರಸ್ತಾವನೆ ಸಲ್ಲಿಸಲಾಗುವುದು
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾ.ಪಂ.ನಿಂದ ಹೂಳೆತ್ತುವ ಕೆಲಸ ಮಾಡಲಾಗಿದೆ. ಈಗ ಸ್ಥಗಿತಗೊಳಿಸಲಾಗಿದ್ದು, ಮತ್ತೆ ಎಪ್ರಿಲ್‌ನಿಂದ ಈ ಕೆಲಸವನ್ನು ಮಾಡಲಾಗುವುದು. ಆದರೆ ಇದರಲ್ಲಿ ಹೂಳೆತ್ತುವ ಕಾರ್ಯ ಮಾತ್ರ ಮಾಡಲಾಗುತ್ತದೆ. ಇನ್ನು ಕೆರೆಯ ದಂಡೆ ನಿರ್ಮಾಣ ಹಾಗೂ ಇತರೆ ಅಭಿವೃದ್ಧಿ ಕೆಲಸದ ಕುರಿತಂತೆ ಪಂಚಾಯತ್‌ನಿಂದ ಶೀಘ್ರ ಸಣ್ಣ ನೀರಾವರಿ ಇಲಾಖೆಗ ಪ್ರಸ್ತಾವನೆ ಸಲ್ಲಿಸಲಾಗುವುದು.
– ಪಾರ್ವತಿ ಹೊಸಾಡು, ಗ್ರಾ.ಪಂ. ಪಿಡಿಒ

ಸಮಗ್ರ ಅಭಿವೃದ್ಧಿಯಾಗಬೇಕು
ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಈ ಕೆರೆ ಪುನಶ್ಚೇತನಗೊಳ್ಳದೆ ಎರಡು ದಶಕಗಳೇ ಕಳೆದಿವೆೆ. ಹೂಳನ್ನೆತ್ತಿ, ಸುತ್ತಲೂ ದಂಡೆ ನಿರ್ಮಾಣ ಮಾಡಬೇಕಿದೆ. ಕೆರೆ ಅಭಿವೃದ್ಧಿಯಿಂದ 400 ಎಕರೆ ಕೃಷಿ ಪ್ರದೇಶಗಳಿಗೆ ಉಪಯೋಗವಾಗಲಿದೆ. ಶಾಸಕರು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು.
– ಶಿವರಾಮ ಶೆಟ್ಟಿ ಕಮ್ಮಾರಕೊಡ್ಲು, ಪ್ರಗತಿಪರ ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next