Advertisement
ಮೂರ್‍ನಾಲ್ಕು ವರ್ಷಗಳ ಹಿಂದೆ ಸೂಲ್ಕುದ್ರು ಭಾಗದಲ್ಲಿ ವ್ಯಾಪಕ ಮರಳುಗಾರಿಕೆ ನಡೆಯುತ್ತಿತ್ತು. ಇದರಿಂದಾಗಿ ತಮ್ಮ ಜಮೀನು, ತೋಟ ಹಾಗೂ ಭೂಮಿಗೆ ಹಾನಿಯಾಗುತ್ತಿದೆ. ಆದ್ದರಿಂದ ಇಲ್ಲಿ ಮರಳುಗಾರಿಕೆ ನಿಷೇಧಿಸುವಂತೆ ಸ್ಥಳೀಯ ಸೂಲ್ಕುದ್ರು ಹಿತರಕ್ಷಣ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಇವರ ಮನವಿ ಪುರಸ್ಕರಿಸಿದ ಜಿಲ್ಲಾಡಳಿತ ಮರಳು ಗಾರಿಕೆ ಕ್ಲಸ್ಟರ್‌ನಿಂದ ಈ ಭಾಗವನ್ನು ಕೈಬಿಟ್ಟು, ಮಾಬುಕಳ ಸೇತುವೆಯಿಂದ ಪೂರ್ವಕ್ಕೆ 2 ಕಿ.ಮೀ. ದೂರದ ವರೆಗೆ ಯಾವುದೇ ಮರಳುಗಾರಿಕೆ ನಡೆಸದಂತೆ ಆದೇಶಿಸಿತ್ತು.
ಡಿ.4ರಂದು ಬೆಳಗಿನ ಜಾವ ಸೂಲ್ಕುದ್ರ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಐದು ದೋಣಿಗಳನ್ನು ಇಲ್ಲಿನ ಗ್ರಾಮ ಹಿತರಕ್ಷಣ ಸಮಿತಿ ಸದಸ್ಯರು ತಡೆ ಹಿಡಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಹಾಗೂ ಸ್ಥಳೀಯ ತಹಶೀಲ್ದಾರ್, ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಪ್ರತಿ ದಿನ ಮಧ್ಯರಾತ್ರಿ ವೇಳೆ ಇದೇ ರೀತಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಸ್ಥಳೀಯರು ಅಧಿಕಾರಿಗಳಲ್ಲಿ ದೂರಿದ್ದಾರೆ. ಕುದ್ರು ಪ್ರದೇಶಕ್ಕೆ ಹಾನಿ ಆರೋಪ
ಸೂಲ್ಕುದ್ರ ಭೌಗೋಳಿಕವಾಗಿ ದ್ವೀಪ ಪ್ರದೇಶವಾಗಿದ್ದು ಇಲ್ಲಿನ ಸುಮಾರು ಹತ್ತು ಎಕ್ರೆ ಜಾಗ ಈಗಾಗಲೇ ನದಿ ಕೊರೆತದಿಂದ ಹಾನಿಯಾಗಿದೆ ಎಂದು ಕಂದಾಯ ಇಲಾಖೆಯ ವರದಿಯಲ್ಲಿ ತಿಳಿಸಿದ್ದು, ಇದಕ್ಕೆ ಮರಳುಗಾರಿಕೆಯೇ ಪ್ರಮುಖ ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ ಹಾಗೂ ಹತ್ತಾರು ಎಕ್ರೆ ತೆಂಗಿನ ತೋಟ, ಗದ್ದೆ , ನದಿ ಪ್ರತಿ ವರ್ಷ ನದಿ ಕೊರೆತಕ್ಕೆ ಸಿಲುಕಿ ಹಾಳಾಗುತ್ತಿದೆ. ಆದ್ದರಿಂದ ಇಲ್ಲಿ ಯಾವುದೇ ಕಾರಣಕ್ಕೆ ಮರಳುಗಾರಿಕೆ ನಡೆಸಬಾರದು ಎನ್ನುವುದು ಸ್ಥಳೀಯರ ಮನವಿಯಾಗಿದೆ.
Related Articles
ಪಾಂಡೇಶ್ವರ- ಬೆಣ್ಣೆಕುದ್ರು ಪ್ರದೇಶದಲ್ಲಿ ಮರುಳುಗಾರಿಕೆ ಕ್ಲಸ್ಟರ್‌ಗೆ ಅನುಮತಿ ನೀಡಲಾಗಿದೆ. ಆದರೆ ಇದನ್ನು ಬಳಸಿಕೊಂಡು ಸುತ್ತಮುತ್ತಲಿನ ನಿಷೆೇಧಿತ ಪ್ರದೇಶದಲ್ಲೂ ಮರಳುಗಾರಿಕೆ ನಡೆಸಲಾಗುತ್ತಿದೆ. ಆದ್ದರಿಂದ ಈ ಕ್ಲಸ್ಟರ್ ಕೂಡ ಕೈ ಬಿಡಬೇಕು ಎಂದು ಗ್ರಾಮಸಭೆಯಲ್ಲಿ ವ್ಯಕ್ತವಾದ ಸ್ಥಳೀಯರ ಮನವಿಯನ್ನು ಗ್ರಾ.ಪಂ. ಈಗಾಗಲೇ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎನ್ನುವ ಬೇಡಿಕೆ ಕೂಡ ಇದೆ.
Advertisement
ಜಿಲ್ಲಾಧಿಕಾರಿಗೆ ವರದಿಸೂಲ್ಕುದ್ರು ಭಾಗದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗತ್ತಿದೆ ಎನ್ನುವ ಬಗ್ಗೆ ದೂರು ಬಂದಿದೆ ಹಾಗೂ ಮರಳುಗಾರಿಕೆ ನಿರತ ಐದು ದೋಣಿಗಳನ್ನು ಸ್ಥಳೀಯರು ತಡೆಹಿಡಿದು ನಮಗೆ ಒಪ್ಪಿಸಿದ್ದಾರೆ. ಈ ದೋಣಿಗಳು ಶ್ರೀನಿವಾಸ್, ಜೀವನ್ ಶೆಟ್ಟಿ, ಉದಯ ಶೇರಿಗಾರ್, ಆಕಾಶ್ ಎನ್ನುವವರಿಗೆ ಸೇರಿದ್ದಾಗಿದೆ. ದೋಣಿಗಳ ಮಾಲಕರಿಗೆ ದಂಡ ವಿಧಿಸಲಾಗುವುದು ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು.
-ಹಾಝಿರ, ಭೂ ವಿಜ್ಞಾನಿ ಗಣಿ ಇಲಾಖೆ ಉಡುಪಿ ಸೂಕ್ತ ಕ್ರಮ ಕೈಗೊಳ್ಳಿ
ಸೂಲ್ಕುದ್ರು ಪ್ರದೇಶದಲ್ಲಿ ಹತ್ತು ಎಕ್ರೆ ಪ್ರದೇಶ ಈಗಾಗಲೇ ಮರಳುಗಾರಿಕೆ ಕಾರಣಕ್ಕೆ ನದಿ ಕೊರೆತದಿಂದ ಹಾನಿಯಾಗಿದೆ ಹಾಗೂ ತೋಟಗಳಿಗೆ ಹಾನಿಯಾಗಿದೆ. ನಿಷೇಧದ ನಡುವೆಯೂ ಮತ್ತೆ-ಮತ್ತೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದು ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆಯುವ ಪ್ರಕ್ರಿಯೆಯಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಅಕ್ರಮದಲ್ಲಿ ತೊಡಗಿದವರ ಪರವಾನಿಗೆಯನ್ನೇ ರದ್ದುಪಡಿಸಬೇಕು.
-ನೆಲ್ಸನ್ ಬಾಂಜ್, ಅಧ್ಯಕ್ಷರು ಸೂಲ್ಕುದ್ರು ಗ್ರಾಮ ಹಿತರಕ್ಷಣ ಸಮಿತಿ -ರಾಜೇಶ್ ಗಾಣಿಗ ಅಚ್ಲಾಡಿ