ಕೂಡ್ಲಿಗಿ: ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಅವರು ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ತನ್ನದೇಯಾದ ಪ್ರಭಾವ ಬೀರಿದ್ದು, ವಾಲ್ಮೀಕಿ ಸಮಾಜ ಪ್ರತಿನಿಧಿಯಾಗಿರುವ ಇವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡದೇ ಉಪಮುಖ್ಯಮಂತ್ರಿ ಮಾಡದೇ ಕಡೆಗಣಿಸಿದ್ದಾರೆ ಎಂದು ತಾಲೂಕಿನ ಬಿಜೆಪಿ ಮುಖಂಡ ಗುಂಡುಮುಣಗು ಪ್ರಕಾಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಬಿಜೆಪಿ ಪಕ್ಷ ರಾಜ್ಯದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಅವರ ಸಾಮರ್ಥ್ಯಕ್ಕೆ ತಕ್ಕ ಖಾತೆ ನೀಡದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ನೀಡಿರುವುದು ಸರಿಯಲ್ಲ. ಬಿಜೆಪಿಯ ಅಮಿತ್ ಶಾ ಅವರು ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಾಗ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಈಗ ಉಪಮುಖ್ಯಮಂತ್ರಿಯನ್ನು ವಾಲ್ಮೀಕಿ ನಾಯಕ ಸಮುದಾಯಕ್ಕೆ ನೀಡದೇ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕನನ್ನು ಕಡೆಗಣಿಸಲಾಗಿದೆ ಎಂದರು.
ಬಿಜೆಪಿ ಹಿರಿಯ ಮುಖಂಡ ಕಕ್ಕುಪ್ಪಿ ಬಸವರಾಜ ಮಾತನಾಡಿ, ಮೊದಲ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲೂ ಬಳ್ಳಾರಿ ಜಿಲ್ಲೆಯ ಬಿಜೆಪಿ ಮುಖಂಡರೇ ಕಾರಣರಾಗಿದ್ದಾರೆ. ಇಂದು ಶ್ರೀರಾಮುಲು ಅವರಿಗೆ ಸೂಕ್ತ ಖಾತೆ ನೀಡದೇ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡದೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡಿರುವುದು ಸರಿಯಾದ ನಿರ್ಧಾರವಲ್ಲ. ಕೂಡಲೇ ಶ್ರೀರಾಮುಲು ಅವರಿಗೆ ಸೂಕ್ತ ಖಾತೆ ನೀಡುವುದರ ಜತೆಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಬಿಜೆಪಿ ಹೈಕಮಾಂಡ್‌ಗೆ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುದರ್ಶನ್ ತಳವಾರ ಎನ್ನುವ ಯುವಕ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದಕ್ಕೆ ಪತ್ರಿಕಾಗೋಷ್ಠಿಯಲ್ಲಿ ತನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರತಿಯನ್ನು ಪ್ರದರ್ಶಿಸಿದರು.
ಬಿಜೆಪಿ ಯುವ ಮುಖಂಡರಾದ ಜಂಬಣ್ಣ, ಗುನ್ನಳ್ಳಿ ಮಂಜುನಾಥ, ಪವನ್ ಕುಮಾರ್, ಎಡಿಗುಡ್ಡ ಬಸವರಾಜ, ಚಂದ್ರಪ್ಪ, ಕಕ್ಕುಪ್ಪಿ ಸುರೇಶ್, ಲಿಂಗರಾಜ, ಸೂಲದಹಳ್ಳಿ ಅಂಜಿನಪ್ಪ, ಸುನೀಲ, ಮಲ್ಲಿಕಾರ್ಜುನ, ಹನುಮಂತ, ಲೋಕೇಶ್, ಮಾರೇಶ್ ಸೇರಿದಂತೆ ಹಲವಾರು ವಾಲ್ಮೀಕಿ ಸಮುದಾಯದ ಯುವಕರು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.