ಕೂಡ್ಲಿಗಿ: ಪಟ್ಟಣದಿಂದ ಕೂಗಿದರೆ ಕೇಳಿಸುವ ಬಡೇಲಡಕು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ ಎಂದರೆ ತಾಲೂಕಿನಿಂದ 50 ಕಿ.ಮೀ. ದೂರದಲ್ಲಿರುವ ಕಲ್ಲಹಳ್ಳಿ, ರಾಯಪುರ, ಕಾರ್ತಿಕೇಯನಹಟ್ಟಿ ಮುಂತಾದ ಗ್ರಾಮಗಳ ಸ್ಥಿತಿ ಹೇಗಿರಬಹುದು ನೀವೇ ಊಹಿಸಿಕೊಳ್ಳಿ.
ತಾಲೂಕು ಆಡಳಿತ ಕುಡಿಯುವ ನೀರಿನ ಸಮಸ್ಯೆ, ಬರದಿಂದ ಕಂಗೆಟ್ಟ ರೈತರಿಗೆ ಉದ್ಯೋಗ ಕೊಡುವುದರಲ್ಲಿ ವಿಫಲವಾಗಿದ್ದು, ಅಧಿಕಾರಿಗಳು ಹಳ್ಳಿಗಳತ್ತ ಮುಖ ಮಾಡದೆ ಸಭೆ, ಸಮಾರಂಭಗಳಿಗಷ್ಟೇ ಮೀಸಲಾಗುತ್ತಿರುವುದು ಸಾರ್ವಜನಿಕರಲ್ಲಿ ಆಡಳಿತದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ.
ಎ ಗ್ರೇಡ್ ಗ್ರಾಪಂನಲ್ಲಿ ಎ ಗ್ರೇಡ್ ಸಮಸ್ಯೆಗಳು: ಬಡೇಲಡಕು ಗ್ರಾಪಂ ತಾಲೂಕು ಕೇಂದ್ರದಿಂದ 3 ಕಿ.ಮೀ ದೂರದಲ್ಲಿದ್ದು, ಈ ವ್ಯಾಪ್ತಿಗೆ ಬರುವ ಹಳ್ಳಿಗಳು ಕೂಡ್ಲಿಗಿ ಪಟ್ಟಣಕ್ಕೆ ಹೊಂದಿಕೊಂಡಂತಿವೆ. ಬಡೇಲಡಕು, ನಾಗಲಾಪುರ, ತುಪ್ಪಾಕನಹಳ್ಳಿ, ಸಣ್ಣ ಗೊಲ್ಲರಹಟ್ಟಿ, ದೊಡ್ಡಗೊಲ್ಲರಹಟ್ಟಿ, ಕೆಂಗಲಹಟ್ಟಿ, ಕುಪ್ಪಿನಕೆರೆ, ಈ ಚಲಬೊಮ್ಮನಹಳ್ಳಿ ಸೇರಿದಂತೆ ಒಟ್ಟು 8 ಹಳ್ಳಿಗಳು ಸೇರಿದ್ದು ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ.
ಕುಡಿಯುವ ನೀರಿನ ಸಮಸ್ಯೆ ಇರುವುದ್ದರಿಂದ ನಾಗಾಪುರ ಗ್ರಾಮಸ್ಥರಿಗೆ ಖಾಸಗಿ ಬೋರ್‌ವೆಲ್‌ನಿಂದ ನೀರು ಪೂರೈಸಲು ಗ್ರಾಪಂ ಮುಂದಾಗಿದೆ. ಬಡೇಲಡಕು ಹೊಸ ಊರು ಹಾಗೂ ದೊಡ್ಡ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದ್ದರಿಂದ 3 ಖಾಸಗಿ ಬೋರ್‌ವೆಲ್ ಮೂಲಕ ಕುಡಿಯುವ ನೀರು ಪೂರೈಸಲು ಮುಂದಾಗಿದ್ದರೂ ನೀರು ಸಾಕಾಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಖಾಲಿ ಕೊಡಗಳಿಂದ ಗ್ರಾಪಂ ಮುತ್ತಿಗೆ: ಇತ್ತೀಚಿಗೆ ಬಡೇಲಡಕು ಗೊಲ್ಲರಹಟ್ಟಿಯ ಜನ ಕುಡಿಯುವ ನೀರಿಗಾಗಿ ತಳ್ಳುವ ಗಾಡಿಗಳಲ್ಲಿ ಖಾಲಿ ಕೊಡ ತಂದು ಗ್ರಾಪಂ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಒಂದೆಡೆ ಬಿಸಿಲಿನ ಝಳ, ಮತ್ತೂಂದೆಡೆ ಕುಡಿಯುವ ನೀರಿನ ಸಮಸ್ಯೆ ಹಳ್ಳಿಗಳ ಜನರು ಪ್ರತಿನಿತ್ಯ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಈ ಬಗ್ಗೆ ಗ್ರಾಪಂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಬೇಸತ್ತು ಇತ್ತೀಚಿಗೆ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ. ಎಲ್ಲಿಯವರೆಗೆ ಸಹಿಸಿಕೊಂಡು ಇರೋದು. ನಮ್ಮ ತಾಳ್ಮೆ ಪರೀಕ್ಷೆ ಮಾಡ್ತಿರೋದಕ್ಕೆ ಅಧಿಕಾರಿಗಳ ವಿರುದ್ಧ ನಮ್ಮ ಆಕ್ರೋಶವಿದೆ.
.
ಬಾಲಪ್ಪ,
ರೈತ, ಬಡೇಲಡಕು ಗೊಲ್ಲರಹಟ್ಟಿ.
ಬಡೇಲಡಕು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಹಾಗಾಗಿ ನಾಗಲಾಪುರ ಗ್ರಾಮದಲ್ಲಿ ಹಾಗೂ ಬಡೇಲಡಕು ಹೊಸ ಊರು, ಬಡೇಲಡಕು ಗೊಲ್ಲರಹಟ್ಟಿ ಗ್ರಾಮಗಳಿಗೆ ಗ್ರಾಮದ ಪಕ್ಕದಲ್ಲಿರುವ ರೈತರ ಪಂಪ್‌ಸೆಟ್‌ಗಳಿಂದ ಕುಡಿಯುವ ನೀರು ಪೂರೈಸುವ ಮೂಲಕ ಬಹುತೇಕ ನೀರಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ.
. ಮೂಕಪ್ಪ, ಪಿಡಿಒ , ಗ್ರಾಪಂ.
ಕೆ.ನಾಗರಾಜ್