ಕೂಡ್ಲಿಗಿ: ತಾಲೂಕಿನ ಜರ್ಮಲಿ ಗ್ರಾಪಂ ವ್ಯಾಪ್ತಿಯ ಗೆದ್ದಲಗಟ್ಟೆ ಹಾಗೂ ಕಾಮಯ್ಯನಹಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.
ಗೆದ್ದಲಗಟ್ಟೆ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ನೀರು ಇದ್ದರೂ ಪೈಪ್‌ಲೈನ್ ವ್ಯವಸ್ಥೆ ಇಲ್ಲದಕ್ಕೆ 1 ಕಿಮೀ ದೂರದಿಂದ ಕುಡಿಯುವ ನೀರು ತರುವ ದುರ್ಗತಿ ಬಂದಿದೆ. ಪಕ್ಕದ ಕಾಮಯ್ಯನಹಟ್ಟಿ ಗ್ರಾಮದಲ್ಲಿ ಕೊಳವೆಬಾವಿ ಇದ್ದು, ಪೈಪ್‌ಲೈನ್ ಕಾಮಗಾರಿಯಾಗಿದ್ದರೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡದೇ ಇದ್ದುದರಿಂದ ಗ್ರಾಮಸ್ಥರು ಕುಡಿಯುವ ನೀರಿಗೆ ಟ್ಯಾಂಕರ್‌ಗಳನ್ನೇ ಕಾಯಬೇಕಾದ ದುಸ್ಥಿತಿ ಇದೆ.
ಗುಡ್ಡಗಾಡುಗಳ ಮಧ್ಯೆಯಿರುವ ಗೆದ್ದಲಗಟ್ಟೆ, ಮತ್ತು ಕಾಮಯ್ಯನಹಟ್ಟಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕೇಳಲು ತಾಲೂಕು ಆಡಳಿತಕ್ಕೆ ಸಮಯ ಇಲ್ಲವಾಗಿದೆ. ತಿಂಗಳಿಗೊಬ್ಬರು ತಾಪಂ ಇಒಗಳು ಬದಲಾವಣೆಯಾಗುತ್ತಿರುವುದರಿಂದ ತಾಲೂಕಿನ ಗ್ರಾಪಂಗಳ ಸಮಸ್ಯೆಗಳ ಬಗ್ಗೆ ಇಒಗಳಿಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಬದಲಾವಣೆಯಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದ್ದು, ಕುಡಿಯಲು ನೀರಿಲ್ಲದೇ ಈ ಅವಳಿ ಗ್ರಾಮಗಳ ಜನತೆ ಹಾಗೂ ಜಾನುವಾರುಗಳು ಹಪಾಹಪಿಸುವಂತಾಗಿದೆ.
ಕೊಳವೆ ಬಾವಿಯಲ್ಲಿ ನೀರಿದ್ದು, ಪೈಪ್‌ಲೈನ್‌ಕಾಮಗಾರಿ ಸಹ ತಾಲೂಕು ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯವರು ಈಗಾಗಲೇ ಪೂರ್ಣಗೊಳಿಸಿದ್ದರೂ ಜೆಸ್ಕಾಂನವರು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡದಿದ್ದರಿಂದ ಇಡೀ ಕಾಮಯ್ಯನಹಟ್ಟಿ ಗ್ರಾಮ ಕುಡಿಯುವ ನೀರಿಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಟ್ಯಾಂಕರ್ ಬರುವುದನ್ನೇ ಕಾಯಬೇಕಾಗಿದೆ. ಟ್ಯಾಂಕರ್ ಊರಿಗೆ ಬಂದರೂ ನೀರು ಸಿಕ್ಕವರಿಗೆ ಸೀರುಂಡೆ ಎನ್ನುವಂತಾಗಿದೆ. ಕೆಲವರಿಗೆ ಸಿಗುತ್ತದೆ ಇನ್ನೂ ಕೆಲವರಿಗೆ ಸಿಗುವುದಿಲ್ಲ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಟ್ಯಾಂಕರ್ ನೀರು ಪೂರೈಕೆ ಮಾಡುವುದರ ಮೂಲಕ ಇದ್ದುದರಲ್ಲಿಯೇ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ತಾಲೂಕು ಆಡಳಿತಕ್ಕೆ ಒಂದು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕೊಡಲು ತಿಂಗಳುಗಟ್ಟಲೇ ಆದರೂ ಸಾಧ್ಯವಾಗಿಲ್ಲ ಎಂದರೆ ಹೇಗೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಗೆದ್ದಲಗಟ್ಟೆ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ನೀರಿದ್ದು, ವಿದ್ಯುತ್ ಸಂಪರ್ಕ ಇದ್ದರೂ ಪೈಪ್‌ಲೈನ್ ಒಡೆದು ಹೋಗಿದ್ದರಿಂದ ಇಲ್ಲಿಯ ಗ್ರಾಮಸ್ಥರು ಕೊಳವೆಬಾವಿ ಇದ್ದಲ್ಲಿಗೆ 1 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ನೀರು ತರಬೇಕಾಗಿದೆ. ತಾಲೂಕು, ಜಿಲ್ಲಾ ಆಡಳಿತದ ಕಾರ್ಯವೈಖರಿ ವಿರುದ್ಧ ಗೆದ್ದಲಗಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮೂರಿನ ಕುಡಿಯುವ ನೀರಿನ ಸಮಸ್ಯೆ ಗಂಭೀರತೆ ಬಗ್ಗೆ ವಿಡಿಯೋ, ಫೋಟೋ ತುಣುಕುಗಳನ್ನು ವ್ಯಾಟ್ಸಾಪ್ ಸಂದೇಶಗಳಲ್ಲಿ ಹರಿಬಿಟ್ಟು ತಾಲೂಕು ಆಡಳಿತ ಎಚ್ಚರಿಸಿದ್ದಾರೆ.
ಗೆದ್ದಲಗಟ್ಟೆ ಗ್ರಾಮದಲ್ಲಿ ಪೈಪ್‌ಲೈನ್‌ಒಡೆದು ಹೋಗಿದ್ದನ್ನು ಸರಿಪಡಿಸಲು ಆಗಿಲ್ಲ. ಹೀಗಾಗಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಊರಾಚೆ ಒಂದು ಕಿಲೋ ಮೀಟರ್ ದೂರ ಬಿಸಿಲಲ್ಲಿ ನಡೆದುಕೊಂಡು ಹೋಗಿ ನೀರು ತರಬೇಕಿದೆ.
•ಬಸವರಾಜ, ಗೆದ್ದಲಗಟ್ಟೆ ಗ್ರಾಮಸ್ಥರು
ಗೆದ್ದಲಗಟ್ಟೆ, ಕಾಮಯ್ಯನಹಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರೋದು ನಿಜ. ಹೀಗಾಗಿಯೇ ಎರಡು ಗ್ರಾಮ ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡ್ತಿದ್ದೀವಿ. ಕಾಮಯ್ಯನಟ್ಟಿ ಗ್ರಾಮದಲ್ಲಿ ಜೆಸ್ಕಾಂ ನವರು ವಿದ್ಯುತ್ ಸಂಪರ್ಕ ಕೊಟ್ಟರೆ ಸಾಕು ನೀರು ಊರಿಗೆ ಹೋಗುತ್ತೆ. ಹೀಗಾಗಿ ತಡವಾಗಿದೆ. ಗೆದ್ದಲಗಟ್ಟೆ ಗ್ರಾಮದಲ್ಲಿ ಪೈಪ್‌ಲೈನ್ ಒಡೆದಿದೆ. ಪೈಪ್‌ಲೈನ್ ದುರಸ್ತಿ ಕಾರ್ಯ ನಡೆದಿದೆ. ಕಾಮಗಾರಿ ಮುಗಿದರೆ ಸಮಸ್ಯೆ ಬಗೆಹರಿಯಲಿದೆ.
•ಬಸಮ್ಮ, ಪಿಡಿಒ, ಜರ್ಮಲಿ ಗ್ರಾಪಂ.