Advertisement

ವಿದ್ಯಾರ್ಥಿಗಳಿಗೆ ಹಬದಾಚರಣೆ ಮಹತ್ವ ತಿಳಿದಿರಲಿ

12:42 PM Jan 16, 2020 | Naveen |

ಕೂಡ್ಲಿಗಿ: ಹಬ್ಬಗಳು ಜನತೆ ಬದುಕಿನ ಜೀವನಾಡಿಯಾಗಿದ್ದು ಮನುಷ್ಯ ಮನುಷ್ಯರ ಮಧ್ಯೆ ಬಾಂಧವ್ಯ ಬೆಸೆಯುವ ಮೂಲಕ ದಿನನಿತ್ಯದ ಜಂಜಡಗಳ ನಡುವೆಯೂ ಬದುಕಿನ ಸಾಮರಸ್ಯವನ್ನು ಹಬ್ಬಗಳಲ್ಲಿ ಕಾಣಬಹುದಾಗಿದೆ ಎಂದು ತಹಶೀಲ್ದಾರ್‌ ಎಸ್‌. ಮಹಾಬಲೇಶ್ವರ ಹೇಳಿದರು.

Advertisement

ಅವರು ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ಸುಗ್ಗಿಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅನೇಕ ಹಬ್ಬಗಳನ್ನು ಜಾತಿ, ಮತ, ಧರ್ಮ ಮೀರಿ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಸಂಕ್ರಾಂತಿ ಹಬ್ಬವನ್ನು ಬೇರೆ ಬೇರೆ ಹೆಸರಿನಲ್ಲಿ ದೇಶದಾದ್ಯಂತ ಎಲ್ಲ ಸಮುದಾಯದವರು ಆಚರಣೆ ಮಾಡುತ್ತಿದ್ದಾರೆ. ಸುಗ್ಗಿ ಕಾಲದಲ್ಲಿ ಆಚರಣೆ ಮಾಡುವ ಸಂಕ್ರಾಂತಿ ರೈತರ ಹಬ್ಬವಾಗಿದೆ.

ಈ ಹಿಂದೆ ರೈತರು ತಾವು ಬೆಳೆದ ಬೆಳೆಗಳನ್ನು ಒಕ್ಕುಲತನ ಮಾಡಿ ರಾಶಿ ಹಾಕಿ ಪೂಜೆ ಮಾಡುವುದು ವಿಶೇಷವಾಗಿದೆ. ಆದರೆ ಆಧುನಿಕ ಯುಗದಲ್ಲಿ ಈ ಸಂಸ್ಕೃತಿ ಮರೆಯಾಗುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಲೇಖಕ ಹಿ.ಮ. ಬಸವರಾಜ ಮಾತನಾಡಿ, ರೈತರ ಕಣಗಳು ಮಾಯವಾಗಿದ್ದು, ಒಕ್ಕಣೆಗಳು ರಸ್ತೆಗೆ ಬಂದಿವೆ. ಹೊಲಗಳು ಸೋಲಾರ್‌ ವಿದ್ಯುತ್‌ ಉತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದರಿಂದ ರೈತ ಸಂಸ್ಕೃತಿಯೇ ಹಾಳಾಗುತ್ತಿದ್ದು,
ಮುಂದಿನ ಪೀಳಿಗೆಗೆ ಒಕ್ಕುಲುತನ ಏನು ಎಂಬುದೇ ಮರೆತುಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಶಿಕಲಾ, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಆಡಳಿತಾ ಧಿಕಾರಿ ಕೆ.ಎಂ. ರಶ್ಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್‌ ಶುಕಾರ್‌, ಬಾಸುನಾಯ್ಕ ವೇದಿಕೆಯಲ್ಲಿದ್ದರು. ಇದಕ್ಕೂ ಮೊದಲು ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಅತಿಥಿಗಳನ್ನು ವೇದಿಕೆಗೆ ಕರತರಲಾಯಿತು.

ನಂತರ ಜೋಳದ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next