ಕೂಡ್ಲಿಗಿ: ಹ್ಯಾಳ್ಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಮೀನು ಬದು ನಿರ್ಮಾಣ ಕಾಮಗಾರಿ ಜೆಸಿಬಿಯಿಂದ ನಡೆದಿದೆ ಹಾಗೂ ಖಾಸಗಿ ಬಡಾವಣೆಗಳಿಗೆ ಶೇ. 78 ನಿವೇಶನಗಳನ್ನು ಬಡಾವಣೆ ಅಭಿವೃದ್ಧಿಯಾಗುವುದಕ್ಕೆ ಮುಂಚೆಯೇ ಹಂಚಿಕೆ ಮಾಡಿದ್ದಾರೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ವೆಂಕಟೇಶ ನಾಯ್ಕ ಆರೋಪಿಸಿದರು.
ಕೂಡ್ಲಿಗಿ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಇದಕ್ಕೆ ತಾಲೂಕು ಕೃಷಿ ಅಧಿಕಾರಿ ಪ್ರಕಾಶ್ ಪ್ರತಿಕ್ರಿಯಿಸಿ, ನಮ್ಮ ತಾಲೂಕಿನಲ್ಲಿ ಜೆಸಿಬಿಯಿಂದ ಕಾಮಗಾರಿ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಸಭೆಗೆ ಉತ್ತರ ನೀಡುವುದಾಗಿ ತಿಳಿಸಿದರು. ಹ್ಯಾಳ್ಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಖಾಸಗಿ ಬಡಾವಣೆಗಳಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ನಿವೇಶನಗಳನ್ನು ಮುಂಜೂರು ಮಾಡಿದ್ದರೂ ಇದುವರೆಗು ಕ್ರಮಕೈಗೊಳ್ಳದೇ ಇರುವುದು ಯಾವ ನ್ಯಾಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು. ಈ ಬಗ್ಗೆ ಈಗಾಗಲೇ ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಾಪಂ ಇಒ ಬಸಣ್ಣ ತಿಳಿಸಿದರು.
ಕುರಿ ಹಾಗೂ ಜಾನುವಾರುಗಳಿಗೆ ಚುಚ್ಚುಮದ್ದು ಲಸಿಕೆ ಹಾಕುವಾಗ ರೈತರು ಹಾಗೂ ಕುರಿಗಾರರಿಂದ ಹಣ ವಸೂಲಿ ಮಾಡುತ್ತಾರೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅಮಲಾಪುರ ಬಸವರಾಜ ಅವರು ಸಭೆಯಲ್ಲಿ ತಾಲೂಕು ಪಶುವೈದ್ಯಾಧಿಕಾರಿ ವಿನೋದ್ ಕುಮಾರ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಕೊಟ್ಟೂರು ಮತ್ತು ದೂಪದಹಳ್ಳಿ ಭಾಗದಲ್ಲಿ ಪಶುವೈದ್ಯರ ಕೊರತೆ ಇದ್ದು ಪಶು ಆಸ್ಪತ್ರೆಗೆ ಬಂದರೆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.ನಂತರ ವಿವಿಧ ಇಲಾಖೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಕೂಡ್ಲಿಗಿ ನೂತನ ಪಟ್ಟಣ ಪಂಚಾಯ್ತಿ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ ಹಾಗೂ ತ್ರಿಮೂರ್ತಿ ಅವರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷ ವೆಂಕಟೇಶ ನಾಯ್ಕ ಅಧ್ಯಕ್ಷತೆವಹಿಸಿದ್ದರು. ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಮಲಾಪುರ ಬಸವರಾಜ, ಇಓ ಬಸಣ್ಣ, ಉದ್ಯೋಗ ಖಾತ್ರಿ ಯೋಜನಾಧಿಕಾರಿ ಪ್ರಕಾಶ ನಾಯ್ಕ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.