Advertisement

ಯುವಕರು ದೇಶಪ್ರೇಮ ಬೆಳೆಸಿಕೊಳ್ಳಲಿ: ಉಮೇಶ್‌

05:36 PM Aug 16, 2019 | Team Udayavani |

ಕಡೂರು: ಯುವಕರು ದೇಶಪ್ರೇಮ ಬೆಳೆಸಿಕೊಳ್ಳಬೇಕೆಂದು ತಹಶೀಲ್ದಾರ್‌ ಉಮೇಶ್‌ ಸಲಹೆ ನೀಡಿದರು. ಪಟ್ಟಣದ ಡಾ| ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

Advertisement

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ದೊರೆಯಿತು. ಸತ್ಯ, ಅಹಿಂಸೆ, ಸತ್ಯಾಗ್ರಹ ಎಂಬ ಮೂರು ಅಸ್ತ್ರಗಳ ಮೂಲಕ ನಡೆದ ಹೋರಾಟ ಬಹುತೇಕ ಭಾರತೀಯರ ಮನಸ್ಸನ್ನು ಸೆಳೆಯಿತು. ಇದರ ಕೀರ್ತಿ ಗಾಂಧೀಜಿಗೆ ಸಲ್ಲುತ್ತದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರಲ್ಲಿದ್ದ ದೇಶಭಕ್ತಿ, ಛಲ ಇಂದು ಕ್ಷೀಣಿಸುತ್ತಿರುವುದು ವಿಷಾದಕರ ಸಂಗತಿ. ದೇಶ ಸದೃಢವಾಗಬೇಕಾದರೆ ಯಾವುದೇ ಜಾತಿ-ಮತ-ಪಂಥ-ಧರ್ಮದ ಹೆಸರಿನಲ್ಲಿ ಭೇದ-ಭಾವ ಮಾಡದೇ ಎಲ್ಲರೂ ಕೂಡಿ ಬಾಳಬೇಕು ಎಂದರು.

ಕಡೂರು ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊಂದಿರಬಹುದು. ಆದರೆ, ಮಾನವೀಯತೆ, ಪ್ರೀತಿ, ಅಂತಃಕರಣ, ಸಹಾಯ ಗುಣಗಳಿಂದ ಉದಾತ್ತ ಮೌಲ್ಯಗಳಲ್ಲಿ ಎಂದೆಂದಿಗೂ ಶ್ರೀಮಂತವಾಗಿದೆ ಎಂಬುದನ್ನು ನಾನು ಮನಗಂಡಿದ್ದೇನೆ ಎಂದರು.

ತಾಲೂಕಿನ ಪ್ರತಿಯೊಂದು ಹಳ್ಳಿಯೂ ಹಚ್ಚಹಸಿರಾಗಬೇಕು. ತಾಯಿ ಕೆಂಚಮ್ಮನ ಕೃಪೆಯಿಂದ ತುಂಬಿರುವ ಮದಗದಕೆರೆ ಸದಾ ತುಂಬಿ ಹರಿಯಬೇಕು. ಸಿಂಗಟಗೆರೆ ಕಲ್ಲೇಶ್ವರನ ಕೃಪೆಯಿಂದ ಉಳಿದ ಎಲ್ಲಾ ಕೆರೆ, ಕಟ್ಟೆಗಳು ತುಂಬಿ ಹರಿಯಲಿ. ಗೋಂದಿ ಅಣೆಕಟ್ಟು ಯೋಜನೆ ಜಾರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, 70 ವರ್ಷಗಳ ಕಾಲ ಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಇತಿಹಾಸ. ಎಲ್ಲರೂ ದೇಶಪ್ರೇಮ ಬೆಳೆಸಿಕೊಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದವರನ್ನು ಸ್ಮರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

Advertisement

ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ತತ್ತರಿಸಿರುವ ಅನೇಕ ಜಿಲ್ಲೆಗಳ ನಮ್ಮ ಸಹೋದರ, ಸಹೋದರಿಯರಿಗೆ ಸಹಾಯ ನೀಡುವುದರ ಮೂಲಕ ಸರಳವಾಗಿ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕಡೂರು ತಾಲೂಕು ಬರದ ನಾಡಾಗಿದ್ದು, ಸಂಪೂರ್ಣ ನೀರಾವರಿ ಮಾಡಲು ಈ ಹಿಂದಿನ ಶಾಸಕರ ಪ್ರಯತ್ನ ನಡೆದಿತ್ತು. ಭದ್ರಾ, ಗೊಂದಿ ಯೋಜನೆಗಳು ಪ್ರಗತಿಯಲ್ಲಿವೆ. ತಿಂಗಳ ಒಳಗಾಗಿ ಗೊಂದಿ ಯೋಜನೆಗೆ ಸಂಪೂರ್ಣ ಹಣಕಾಸಿನ ಒಪ್ಪಿಗೆ ಪಡೆಯಲಾಗುತ್ತದೆ. ಕಡೂರು-ಬೀರೂರು ಪಟ್ಟಣಕ್ಕೆ ಭದ್ರಾ ಕುಡಿಯುವ ನೀರಿನ ಜೊತೆಗೆ 36ಹಳ್ಳಿಗಳಿಗೆ ನೀರು ನೀಡಲಾಗುವುದು. ಜಲಧಾರೆ ಯೋಜನೆಯಿಂದ ತರೀಕೆರೆ, ಕಡೂರು ತಾಲೂಕಿನ 451ಹಳ್ಳಿಗಳಿಗೆ ಕುಡಿಯಲು ನೀರೊದಗಿಸಲು 615 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷೆ ಭಾರತಿ ಪ್ರಹ್ಲಾದ್‌, ಜಿಪಂ ಸದಸ್ಯರಾದ ಮಹೇಶ್‌ ಒಡೆಯರ್‌, ತಾಪಂ ಸದಸ್ಯ ದಾಸಯ್ಯನಗುತ್ತಿ ಚಂದ್ರಪ್ಪ, ಪುರಸಭೆ ಸದಸ್ಯೆ ಮಂಜುಳಾ ಚಂದ್ರು, ಯತೀಶ್‌, ತಾಪಂ ಇಒ ಡಾ| ದೇವರಾಜ್‌ ನಾಯ್ಕ, ಬಿಇಒ ರಂಗನಾಥಸ್ವಾಮಿ, ವೃತ್ತ ನಿರೀಕ್ಷಕ ಮಂಜುನಾಥ್‌, ಪಿಎಸ್‌ಐ ವಿಶ್ವನಾಥ್‌, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು.

ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗೆ ನೃತ್ಯ ನಡೆಯಿತು. ಸರ್ಕಾರಿ ಶಾಲೆಯಲ್ಲಿ ಓದಿ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಲ್ಯಾಪ್‌ಟಾಪ್‌ ನೀಡಿ ಪುಸ್ಕರಿಸಲಾಯಿತು. ಹೂವಿನ ಹೊನ್ನಮ್ಮ ಮತ್ತು ಇತರರಿಗೆ ಸಾಗುವಳಿ ಹಕ್ಕುಪತ್ರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next